
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಸಂಸ್ಥಾಪಕರ ದಿನ ಹಾಗೂ ಕಲೆ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಚುಟುವಟಿಕೆಗಳ ಅಭಿವ್ಯಕ್ತಿ-2026ರ ಮುಕ್ತಾಯ ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ದತ್ತಿ ಪ್ರಶಸ್ತಿ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಕ್ರೀಡೆ ಮನುಷ್ಯನ ದೈಹಿಕ ಆರೋಗ್ಯವನ್ನು ಕಾಪಾಡಿದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮನುಷ್ಯನ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲಿವೆ ಎಂದರು. ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜನ್ನು ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು 1962ರಲ್ಲಿ ಸ್ಥಾಪಿಸಿ, ಎಲ್ಲಾ ರೀತಿಯ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲಾ ರೀತಿ ನೆರವನ್ನು ನೀಡಿ, ಇಂದು ಕಾಲೇಜು ರಾಜ್ಯದಲ್ಲಿ ಪ್ರತಿಷ್ಠಿತ ಕಾಲೇಜಾಗಿ ಗುರುತಿಸಿಕೊಂಡಿದೆ. ಎನ್.ಎಸ್.ಎಸ್, ಎನ್.ಸಿ.ಸಿ, ಸ್ಕೌಟ್ಸ್, ರೆಡ್ ಕ್ರಾಸ್ ಸಂಸ್ಥೆಗಳ ಮೂಲಕ ಮಕ್ಕಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಲಾಗುತ್ತಿದೆ ಎಂದು ಟಿ.ಕೆ.ನಂಜುಂಡಪ್ಪ ತಿಳಿಸಿದರು.ಸಂಸ್ಥಾಪಕರ ಕುರಿತು ವಿಶೇಷ ಉಪನ್ಯಾಸ ನೀಡಿದ ಶ್ರೀಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕರಾದ ಡಾ.ಡಿ.ಎನ್. ಯೋಗೀಶ್ವರಪ್ಪ, ಭಕ್ತರಿಂದ ನಡೆದಾಡುವ ದೇವರು ಎಂದು ಕರೆಯಿಸಿಕೊಂಡಿದ್ದ ಡಾ.ಶ್ರೀಶಿವಕುಮಾರ ಸ್ವಾಮೀಜಿ, ಅಲ್ಲಮನ ಜ್ಞಾನ, ಬಸವಣ್ಣನ ಭಕ್ತಿ, ಅಕ್ಕಮಹಾದೇವಿಯ ವೈರಾಗ್ಯ, ಸಿದ್ದರಾಮೇಶ್ವರರ ಸಮಾಜ ಸೇವೆಯ ಸಮ್ಮಿಶ್ರಣವಾಗಿದ್ದಾರೆ. 1941ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ, ಶಾಲಾ, ಕಾಲೇಜುಗಳನ್ನು ತೆರೆದು, ಬಡವಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಿದರು. ವಿದ್ಯಾರ್ಥಿಗಳಿಗಾಗಿ ಟೈಪರೆಟಿಂಗ್ ಶಾಲೆ, ಐಟಿಐ ಕಾಲೇಜುಗಳಂತಹ ವೃತ್ತಿಪರ ಕೋರ್ಸುಗಳನ್ನು ತೆರೆದು ಇಡೀ ಜೀವನವನ್ನು ವಿದ್ಯಾರ್ಥಿಗಳು ಹಾಗೂ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೀವನದ ಸಮಗ್ರ ಅಭಿವೃದ್ದಿ ಒತ್ತು ನೀಡಲಾಗುತ್ತಿದೆ. ಪ್ರತಿವರ್ಷ ಕಾಲೇಜಿನ ರ್ಯಾಂಕುಗಳ ಸಂಖ್ಯೆ ಹೆಚ್ಚಳವಾಗುವುದರ ಜೊತೆಗೆ, ವಿವಿ ಮಟ್ಟದಲ್ಲಿ ಸಾಂಸ್ಕೃತಿಕ, ಕ್ರೀಡೆ ಇನ್ನಿತರ ವಿಭಾಗಗಳಲ್ಲಿಯೂ ನಮ್ಮ ಮಕ್ಕಳು ಹೆಸರು ಮಾಡುತ್ತಿದ್ದಾರೆ. ನುರಿತ ಶಿಕ್ಷಕ ವೃಂದ ತಮ್ಮ ಎಲ್ಲಾ ಜ್ಞಾನವನ್ನು ಧಾರೆ ಎರೆದು ವಿದ್ಯಾರ್ಥಿಗಳು ಭವಿಷ್ಯದ ಸ್ಪರ್ಧಾತ್ಮಕ ಜಗತ್ತು ಎದುರಿಸಲು ತಯಾರಿ ಮಾಡುತಿದ್ದಾರೆ ಎಂದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಉದಯಕುಮಾರ್, ಅಭಿವ್ಯಕ್ತಿಯ ಸಂಚಾಲಕರಾದ ರತ್ನಮ್ಮ,ಸಹ ಸಂಚಾಲಕರಾದ ಶ್ರೀವಲ್ಲಿ ಎನ್.ಸಿ.ಸಿ.ಅಧಿಕಾರಿಗಳಾದ ಲೆಪ್ಪಿನೆಂಟ್ ರಾಮಲಿಂಗಾರೆಡ್ಡಿ, ಲೆಫ್ಟಿನೆಂಟ್ ಶೃತಿ, ಎನ್.ಎಸ್.ಎಸ್.ಅಧಿಕಾರಿ ಕುಮಾರಸ್ವಾಮಿ, ಸ್ಕೌಟ್ ಅಧಿಕಾರಿ ಮೋಹನಕುಮಾರಿ ಮತ್ತಿತರರು ಉಪಸ್ಥಿತರಿದ್ದರು.