ಗೋ ಸಂರಕ್ಷಣೆ ಕಾಯ್ದೆ ಸಡಿಲಿಸದಂತೆ ಒತ್ತಾಯ

KannadaprabhaNewsNetwork |  
Published : Dec 09, 2025, 03:15 AM IST
ವಿಜಯಪುರ | Kannada Prabha

ಸಾರಾಂಶ

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ನಿರ್ಣಯವನ್ನು ಖಂಡಿಸಿ ವಿಜಯಪುರ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಗೋ ಸಂರಕ್ಷಣೆ ಕಾನೂನು ಸಡಿಲಗೊಳಿಸುತ್ತಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ನಿರ್ಣಯವನ್ನು ಖಂಡಿಸಿ ವಿಜಯಪುರ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಪ್ರಾಂತ ಪ್ರಮುಖರಾದ ಸುನೀಲ ಭೈರವಾಡಗಿ ಮಾತನಾಡಿ, ಸದರಿ ಕಾಯ್ದೆ ತಿದ್ದುಪಡಿಯು ಸಂವಿಧಾನದ ಅಶಯಕ್ಕೆ ಹಾಗೂ ರಾಜ್ಯದ ಮತ್ತು ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿದೆ. ಇದನ್ನು ವಿಧಾನ ಸಭೆಯಲ್ಲಿ ಮಂಡಿಸದಂತೆ ಸರ್ವ ಕ್ರಮ ಕೈಗೊಳ್ಳಬೇಕು. ತಿದ್ದುಪಡಿ ಮಾಡುವುದನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಗೋವುಗಳನ್ನು ಅತ್ಯಂತ ಹಿಂಸಾತ್ಮಕವಾಗಿ ಒಂದೇ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಒಂದರ ಮೇಲೊಂದು ಹಾಕಿ ದುಡ್ಡಿನ ಆಸೆಗಾಗಿ ಸಾಗಾಟ ಮಾಡುತ್ತಿದ್ದಾರೆ. ಈ ಕಾಯಿದೆ 2021 ರಲ್ಲಿ ಜಾರಿಯಾದ ನಂತರ ಈ ಕ್ರೂರತೆ ಒಂದಷ್ಟು ಕಡಿಮೆಯಾಗಿದೆ. ಆದರೆ ಇನ್ನೂ ಕೂಡ ಕಾಯ್ದೆ ಪರಿಣಾಮಕಾರಿಯಾಗಿ ಜಾರಿ ಮಾಡದೇ, ಹಲವೆಡೆ ಹಣದ ಆಸೆಗಾಗಿ ವಾಹನದ ಮಾಲೀಕರು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುವುದು ಕಂಡುಬಂದಿದೆ. ಇದನ್ನು ನಿಯಂತ್ರಿಸಬೇಕಾದರೆ ಸದರಿ ಕಾಯಿದೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಆದರೆ ಸರ್ಕಾರ ಇದಕ್ಕೆ ವಿರುದ್ಧವಾಗಿ ಕಟುಕರಿಗೆ ಹಾಗೂ ಅಕ್ರಮ ಗೋ ಕಳ್ಳರಿಗೆ ಸುಲಭವಾಗಿ ಸಾಗಾಟ ಮಾಡಲು ಅನುಕೂಲವಾಗುವಂತೆ ತಿದ್ದುಪಡಿ ತರುತ್ತಿರುವುದು ಖಂಡನೀಯ ಎಂದರು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೋಡಗಿ ಮಾತನಾಡಿ, ಈ ಕಾಯ್ದೆ ಕೇವಲ ಜಾನುವಾರು ವಧೆ ನಿಷೇಧಿಸುವ ಉದ್ದೇಶ ಮಾತ್ರವಲ್ಲದೆ ಸಂರಕ್ಷಣಾ ಕಾಯ್ದೆಯೂ ಆಗಿದೆ. ಮುಖ್ಯವಾಗಿ ಸಾಗಾಟದ ಸಮಯದಲ್ಲಿ ಜಾನುವಾರುಗಳಿಗೆ ವಾಹನದ ಮಾಲೀಕರು ನೀಡುವ ಕ್ರೂರ ಸಾಗಾಟ ನಿಲ್ಲಿಸಿ, ಜಾನುವಾರುಗಳಿಗೆ ಆಗಬಹುದಾದಂತ ಹಿಂಸೆ, ಗಾಯಗಳಿಂದ ಸಂರಕ್ಷಣೆ ಮಾಡುವ ಉದ್ದೇಶ ಹೊಂದಿದೆ. ಈಗ ಕಾನೂನು ದುರ್ಬಲಗೊಳಿಸುವ ಮೂಲಕ ವಾಹನ ಸಾಗಾಟಗಾರರಿಗೆ, ಗೋ ಹಂತಕರಿಗೆ ಕಾಂಗ್ರೆಸ್ ಸರ್ಕಾರ ನಿರ್ಭಯ ಕೊಡಲು ಹೊರಟಿದೆ. ಇದರಿಂದ್ದ ಗೋವುಗಳ ಹಿಂಸೆ ಹಾಗೂ ಅವುಗಳ ಹತ್ಯೆ ಇನ್ಮುಂದೆ ಹೆಚ್ಚಾಗಲಿದೆ. ಇದು ಹಿಂದುಗಳಿಗೆ ಪೂಜನೀಯವಾಗಿರುವ ಗೋವುಗಳಿಗೆ ನೋವು, ಹಿಂಸೆ ಮಾಡಲು ಕಾಂಗ್ರೆಸ್ ಸರ್ಕಾರ ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಆರೋಪಿಸಿದರು.

ಗೋ ಕಳ್ಳ ಸಾಗಾಟಗಾರರಿಗೆ ಈ ತಿದ್ದುಪಡಿಯಿಂದ ನಿರ್ಭಯತ್ವ ನೀಡುವುದು ಸಂವಿಧಾನ ವಿರೋಧಿಯಾಗಿದೆ. ಸಂವಿಧಾನದ 51ಎ ಕಲಂ ಪ್ರಕಾರ ಜೀವಿಗಳಿಗೆ ಕರುಣೆ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯವಾಗಿದೆ. ಇದು ರಾಜ್ಯ ಸರ್ಕಾರಕ್ಕೂ ಅನ್ವಯವಾಗುತ್ತದೆ. ಸದರಿ ಕಾಯ್ದೆ ತಿದ್ದುಪಡಿ ಸಂವಿಧಾನದ ಈ ಆಶಯಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಂತ ಪ್ರಮುಖ ಶ್ರೀಮಂತ ದುದ್ದಗಿ, ಜಿಲ್ಲಾ ಕಾರ್ಯದರ್ಶಿ ಸಿದ್ದು ಹೂಗಾರ ಮಾತನಾಡಿ, ಸಂವಿಧಾನದ ರಕ್ಷಣೆಗಾಗಿ ಈ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಮಾಜದ ಪರವಾಗಿ ಆಗ್ರಹಿಸಿದರು. ಪ್ರಾಂತ ಸಹ ಪ್ರಮುಖ ಶೇಖರ ಹರನಾಳ, ಶಿವಾನಂದ ಸುತ್ತಗೊಂಡಿ, ಸಿದ್ದು ಹೂಗಾರ, ಹನುಮಂತ ಪೂಜಾರಿ, ಪ್ರವೀಣ ಪೋಳ, ಡಾ. ಆನಂದ ಕುಲಕರ್ಣಿ, ಭೀಮಾಶಂಕರ ಹೊನ್ನುಟಗಿ, ಈರಣ್ಣ ಹಳ್ಳಿ, ಪ್ರಶಾಂತ ಪಟ್ಟಣಶೆಟ್ಟಿ, ವಿರೇಶ ಬಿರಾದಾರ, ವಿನಾಯಕ ಕುಂಬಾರ, ಪ್ರವೀಣ ಬಿರಾದಾರ, ಅಶ್ವಿನ ಕುಮಾರ ಪಟ್ಟಣಶೆಟ್ಟಿ, ಮಹೇಶ ಸಾಲೋಟಗಿ ಸೇರಿ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಪಡೆ ಹೋಬಳಿ ಮಟ್ಟದ ಕಡೆ; ಆರೋಗ್ಯ ಉಚಿತ ತಪಾಸಣಾ ಶಿಬಿರ
ನಮಗೆ ಕನ್ಯೆ ಸಿಗುತ್ತಿಲ್ಲ.. ದಾನ್ಯಕ್ಕೆ ಮಠ ಕಟ್ಟಿಸಿಕೊಡಿ..!