ಕಬ್ಬಿಗೆ ದರ ನಿಗದಿಪಡಿಸುವ ಮುನ್ನವೇ ಕಬ್ಬು ಕಟಾವು ಹಾಗೂ ಕಾರ್ಖಾನೆ ಆರಂಭಿಸಲು ಮುಂದಾದ ಹಿನ್ನೆಲೆಯಲ್ಲಿ ರಟ್ಟಿಹಳ್ಳಿ ತಾಲೂಕಿನ ಬೈರನಪಾದದಲ್ಲಿರುವ ಜಿಎಂ-2 ಸಕ್ಕರೆ ಕಾರ್ಖಾನೆ ವಿರುದ್ಧ ರೈತರು ಶನಿವಾರ ರಾಣಿಬೆನ್ನೂರು-ಹೊನ್ನಾಳಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಹಾವೇರಿ: ಕಬ್ಬಿಗೆ ದರ ನಿಗದಿಪಡಿಸುವ ಮುನ್ನವೇ ಕಬ್ಬು ಕಟಾವು ಹಾಗೂ ಕಾರ್ಖಾನೆ ಆರಂಭಿಸಲು ಮುಂದಾದ ಹಿನ್ನೆಲೆಯಲ್ಲಿ ರಟ್ಟಿಹಳ್ಳಿ ತಾಲೂಕಿನ ಬೈರನಪಾದದಲ್ಲಿರುವ ಜಿಎಂ-2 ಸಕ್ಕರೆ ಕಾರ್ಖಾನೆ ವಿರುದ್ಧ ರೈತರು ಶನಿವಾರ ರಾಣಿಬೆನ್ನೂರು-ಹೊನ್ನಾಳಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕಬ್ಬಿನ ದರ ನಿಗದಿಯಾಗುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂಬ ಸರ್ಕಾರದ ಸೂಚನೆ ಇದ್ದರೂ, ಜಿಎಂ ಸಕ್ಕರೆ ಕಾರ್ಖಾನೆ ಕಬ್ಬು ಕಟಾವಿಗೆ ಮುಂದಾಗಿದೆ. ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಕಾರ್ಖಾನೆ ವಿರುದ್ಧ ದೂರು ಸಲ್ಲಿಸಲಾಗಿತ್ತು. ಈ ವೇಳೆ ರೈತರ ಮನವಿಗೆ ಸ್ಪಂದಿಸಿದ ಸಚಿವ ಪ್ರಹ್ಲಾದ ಜೋಶಿ ಅವರು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಕಬ್ಬಿನ ದರ ನಿಗದಿಯಾಗುವವರೆಗೆ ಕಾರ್ಖಾನೆ ಆರಂಭಿಸಬಾರದು ಎಂದು ಸೂಚಿಸಿದರು. ಅ.12ರಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಕಬ್ಬು ಬೆಳೆಗಾರರ ಸಭೆ ನಡೆಸಿ ದರ ನಿಗದಿ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಕಾರ್ಖಾನೆ ಆರಂಭಿಸಬಾರದು ಎಂದು ತಿಳಿಸಿದರು. ಅಲ್ಲದೆ, ಜಿಲ್ಲಾಧಿಕಾರಿಗಳಿಗೂ ದೂರವಾಣಿ ಮೂಲಕ ಮಾತನಾಡಿ ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದರು.
ಆದಾಗ್ಯೂ, ಕಾರ್ಖಾನೆಯವರು ಕಬ್ಬು ಕಟಾವಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ರಟ್ಟಿಹಳ್ಳಿ ತಹಸೀಲ್ದಾರ್ ಹಾಗೂ ಡಿವೈಎಸ್ಪಿ ಅಧಿಕಾರಿಗಳು ಪ್ರತಿಭಟನೆ ಮುಂದುವರಿಸದಂತೆ ಮನವಿ ಮಾಡಿದರು. ಆದರೆ, ಕಾರ್ಖಾನೆ ಆಡಳಿತ ಮಂಡಳಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕು ಎಂದು ರೈತರು ಪಟ್ಟು ಹಿಡಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಕೇಂದ್ರ ಸಚಿವ ಸಂಪುಟ ಸಭೆ ನಡೆಯುವ ಅ.12ರ ವರೆಗೆ ಕಾರ್ಖಾನೆಗೆ ಕಬ್ಬು ಕಟಾವು ಮಾಡಿಸುವುದಿಲ್ಲ ಹಾಗೂ ಕಾರ್ಖಾನೆ ಆರಂಭಿಸುವುದಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿ ಭರವಸೆ ನೀಡಿತು. ಈ ಭರವಸೆಯನ್ನು ಲಿಖಿತವಾಗಿ ನೀಡಬೇಕು ಎಂದು ರೈತರು ಪಟ್ಟು ಹಿಡಿದರು.
ಅಂತಿಮವಾಗಿ ಕಾರ್ಖಾನೆ ಆಡಳಿತ ಮಂಡಳಿಯಿಂದ ಮುಚ್ಚಳಿಕೆ ಪತ್ರ ಪಡೆಯಲಾಯಿತು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಮುಂದೆ ಮತ್ತೆ ಕಬ್ಬು ಕಟಾವಿಗೆ ಅಥವಾ ಕಾರ್ಖಾನೆ ಆರಂಭಿಸಲು ಮುಂದಾದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ವೀರಯ್ಯ ಹಿರೇಮಠ, ಚನ್ನಬಸಪ್ಪ ಹಾವಣಗಿ, ಪಕೀರಪ್ಪ ಮರೋಳ, ದಿಳ್ಳೆಪ್ಪ, ಅಲ್ತಾಫ್ ಶಿರಟ್ಟಿ, ಹರೀಶ, ಸಂಜೀವ, ನಿಂಗನಗೌಡ, ವೀರನಗೌಡ ಪಾಟೀಲ, ಮಂಜಣ್ಣ ಸುತ್ಕೋಟಿ, ನಿಂಗಪ್ಪ ದರಪ್ಪನವರ್ ಸೇರಿದಂತೆ ನೂರಾರು ರೈತ ಮುಖಂಡರು ಹಾಗೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.