ಹೊನ್ನಾವರ: ತಾಲೂಕಿನ ಕಾಸರಕೋಡು ಟೊಂಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕಾಸರಕೋಡು ಸೆಂಟ್ ಜೋಸೆಫ್ ಸಭಾಂಗಣದಲ್ಲಿ ಭಾನುವಾರ ಮೀನುಗಾರರ ಸಂಘಟನೆಗಳ ಜಂಟಿ ಹೋರಾಟ ಸಮಿತಿ ಮತ್ತು ಕರಾವಳಿ ಮೀನುಗಾರರ ಕಾರ್ಮಿಕರ ಸಂಘದ ಆಶ್ರಯದಲ್ಲಿ ಮೀನುಗಾರರ ಸಮಾವೇಶದಲ್ಲಿ ನಿರ್ಣಯಿಸಲಾಯಿತು.
ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮಾತನಾಡಿ, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕರಾವಳಿಯ ಧಾರಣಾ ಶಕ್ತಿಯನ್ನು ಮೀರಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸಲಾಗುತ್ತಿದೆ. ಕರಾವಳಿಯ ಉದ್ದಕ್ಕೂ ಪರಿಸರನಾಶ ಮಾಡುವ ಅವೈಜ್ಞಾನಿಕ ಯೋಜನೆಗಳನ್ನು ತರಲು ಹಂತ- ಹಂತವಾಗಿ ಮೀನುಗಾರರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ವಾಣಿಜ್ಯ ಕಂಪನಿಯ ಬಂದರು ನಿರ್ಮಾಣ ಕಾಮಗಾರಿಯನ್ನು ನಡೆಸಲು ಚುನಾವಣಾ ನೀತಿ ಸಂಹಿತೆ ಜಾರಿಯಾದ ಸಂದರ್ಭದಲ್ಲಿ ಅಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿ ಮೀನುಗಾರರ ಧ್ವನಿ ಅಡಗಿಸಲು ಮುಂದಾಗಿದ್ದಾರೆ. ಹೋರಾಟಗಾರ ಮೀನುಗಾರರ ಮೇಲೆ ಸುಳ್ಳು ಕೇಸು ಹಾಕಲಾಗಿದೆ ಎಂದರು.
ಮೀನುಗಾರರ ಜಿಲ್ಲಾ ಒಕ್ಕೂಟದ ವಿಕಾಸ ತಾಂಡೇಲ ಮಾತನಾಡಿ, ಒಂದೊಂದೇ ಬಂದರು ವಿಷಯದಲ್ಲಿ ಹೋರಾಟ ಮಾಡುವ ಬದಲು ಇಡೀ ಸಾಗರಮಾಲಾ ಯೋಜನೆಯನ್ನು ವಿರೋಧಿಸಬೇಕು. ಮೀನುಗಾರರು ಮತದಾನ ಬಹಿಷ್ಕರಿಸಿ ಹೋರಾಟವನ್ನು ತೀವ್ರಗೊಳಿಸಬೇಕು ಎಂದರು.ಅಖಿಲ ಭಾರತ ಕೊಂಕಣ ಖಾರ್ವಿ ಮಹಾಸಭಾದ ಅಧ್ಯಕ್ಷ ಮೋಹನ ಬಾನಾವಳಿಕರ ಅವರು, ಹೊನ್ನಾವರ ವಾಣಿಜ್ಯ ಬಂದರು ಯೋಜನೆ ಕಾರ್ಯಗತವಾಗದಂತೆ ಸಚಿವ ಮಂಕಾಳು ವೈದ್ಯ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಗಣಪತಿ ಮಾಂಗ್ರೆ ಅವರು, ಕಾಸರಕೋಡು ವಾಣಿಜ್ಯ ಬಂದರಿಗೆ ಸ್ಥಳ ಬಿಟ್ಟು ಕೊಡದಂತೆ ಹೋರಾಟ ಮಾಡಬೇಕು. ರಾಜಕೀಯ ಬದಿಗಿಟ್ಟು ಹೋರಾಟ ನಡೆಸಬೇಕು. ಕಡಲತೀರಗಳನ್ನು ಮೀನುಗಾರರಿಗೆ ಬಲವಂತದಿಂದ ಕಿತ್ತುಕೊಳ್ಳುವ ಜಿಲ್ಲಾಡಳಿತಕ್ಕೆ ಧಿಕ್ಕಾರ ಎಂದರು.
ಕುಮಟಾದ ಬಾಬು ಕುಬಲ ಮಾತನಾಡಿ, ಮೀನುಗಾರರು ಸಂಘಟನಾತ್ಮಕ ಹಾಗೂ ಕಾನೂನಾತ್ಮಕ ಹೋರಾಟವನ್ನು ಮುಂದುವರಿಸಬೇಕು ಎಂದರು.
ಹೊನ್ನಾವರ ಪಪಂ ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ, ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ ಜಿ. ತಾಂಡೇಲ, ಗ್ರಾಪಂ ಸದಸ್ಯ ಜಗದೀಶ ತಾಂಡೇಲ, ಪರ್ಶಿನ್ ಬೋಟ ಮಾಲೀಕರ ಸಂಘದ ಅಧ್ಯಕ್ಷ ಹಮಜಾ ಪಟೇಲ, ರಾಜು ತಾಂಡೇಲ, ವಿವನ ಫರ್ನಾಂಡಿಸ್ ಹಾಗೂ ವಿವಿಧ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು. ಅಂಕೋಲಾದ ರಾಜು ಹರಿಕಂತ್ರ, ಹೋರಾಟಗಾರ ಗಣಪತಿ ತಾಂಡೇಲ, ಮಹ್ಮೂದ ಕೋಯಾ, ಆಯೂಬ, ಪಾರ್ವತಿ, ರೇಖಾ, ಇತರ ಪ್ರಮುಖರು ಸೇರಿದಂತೆ ಸಾವಿರಾರು ಮೀನುಗಾರರು ಉಪಸ್ಥಿತರಿದ್ದರು.
ಪ್ರಮುಖ ನಿರ್ಣಯಗಳು
- ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರು ನಿರ್ಮಿಸುವ ಅವೈಜ್ಞಾನಿಕ ನೀತಿ ಕೈಬಿಡಬೇಕು
- ಉದ್ದೇಶಿತ ಕಾಸರಕೋಡು ಟೊಂಕದ ವಾಣಿಜ್ಯ ಬಂದರು ನಿರ್ಮಾಣ ಯೋಜನೆ ಕೈಬಿಡಬೇಕು
- ಕಡಲತೀರ ಮತ್ತು ಕಡಲಾಮೆಗಳು ಮೊಟ್ಟೆಇಡುವ ಜೀವವೈವಿದ್ಯತೆ ತಾಣ ರಕ್ಷಿಸಿ
- ಕಾರವಾರ ಬಂದರು ವಿಸ್ತರಿಸುವ ಯೋಜನೆ ಕೈಬಿಡಬೇಕು
- ಕಾಸರಕೋಡು ಮೀನುಗಾರರ ಮೇಲಿನ ಮೊಕದ್ದಮೆ ಹಿಂಪಡೆಯಬೇಕು
- ಹೋರಾಟಕ್ಕೆ ಸ್ಪಂದನೆ ಸಿಗದಿದ್ದರೆ ಮತದಾನ ಬಹಿಷ್ಕಾರ
- ಕಾಸರಕೋಡಿನಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್ ಪಾರ್ಕ್‌ಗೆ ಸರ್ಕಾರ ಒಪ್ಪಿಗೆ ನೀಡಲಿ