ಬ್ಯಾಡಗಿ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್) ಯನ್ನು ರಾಜ್ಯದ ಎಲ್ಲ ಸರ್ಕಾರಿ ನೌಕರರು ಹಾಗೂ ಶಿಕ್ಷಕರಿಗೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಸದಸ್ಯರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಿ.ಎಸ್. ಸಣ್ಣಗೌಡ್ರ ಮಾತನಾಡಿ, ಶಿಕ್ಷಕರು ಇಂದು ಕೇವಲ ಬೋಧನಾ ಕಾರ್ಯಕ್ಕೆ ಮಾತ್ರ ಸೀಮಿತರಾಗಿಲ್ಲ. ಚುನಾವಣೆ, ಜನಗಣತಿ, ವಿವಿಧ ಸಮೀಕ್ಷೆಗಳು, ಆರೋಗ್ಯ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಅನೇಕ ಸರ್ಕಾರಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟೆಲ್ಲ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುತ್ತಿದ್ದರೂ ನಿವೃತ್ತಿ ಬಳಿಕ ಆರ್ಥಿಕ ಭದ್ರತೆಯ ಕೊರತೆ ಎದುರಾಗುತ್ತಿರುವುದು ಆತಂಕಕಾರಿ ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮಾಲತೇಶ ಕಂಬಳಿ ಮಾತನಾಡಿ, ರಾಜ್ಯದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಮೇಲೆ ಹೆಚ್ಚುವರಿ ಕೆಲಸದ ಒತ್ತಡ ಉಂಟಾಗಿದೆ. ಅನಗತ್ಯ ಕಚೇರಿ ಕೆಲಸ, ಆನ್‌ಲೈನ್ ಮಾಹಿತಿ ಅಪ್‌ಲೋಡ್, ಆಡಳಿತಾತ್ಮಕ ಜವಾಬ್ದಾರಿಗಳಿಂದ ಬೋಧನೆಯ ಗುಣಮಟ್ಟಕ್ಕೂ ಹಿನ್ನಡೆಯಾಗುತ್ತಿದೆ. ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವುದು, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುವುದು, ಪದೋನ್ನತಿ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಸೇವಾ ಸೌಲಭ್ಯಗಳನ್ನು ಸುಧಾರಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಸ್.ಜಿ. ಪಾಟೀಲ ಎಸ್.ಬಿ. ಅಂಗರಗಟ್ಟಿ, ಎಂ.ಎಸ್. ಕರ್ಜಗಿ, ಕರಿಗಾರ, ಎಂ.ಕೆ. ರಾಜೇಶ ಉಮೇಶ ಛತ್ರದ, ಪಿ. ಬಸವರಾಜಪ್ಪ, ಎಚ್.ಬಿ. ದಾಸರ, ಎ.ಟಿ. ಪೀಠದ, ರವಿ ಆನ್ವೇರಿ, ಎಸ್.ಪಿ. ಮಠದ ಸೇರಿದಂತೆ ತಾಲೂಕಿನ ವಿವಿಧ ಪ್ರೌಢಶಾಲೆಗಳ ಶಿಕ್ಷಕರು ಮತ್ತು ಶಿಕ್ಷಕಿಯರು ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.