ಕನ್ನಡಪ್ರಭ ವಾರ್ತೆ ಅಥಣಿ
ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನ ಪ್ರಗತಿಯಲ್ಲಿದೆ. ಕರ್ನಾಟಕ ರಾಜ್ಯದ ಜವಾಬ್ದಾರಿ ವಹಿಸಿಕೊಂಡ ಬಳಿಕ ಎಲ್ಲ ಜಿಲ್ಲೆಗಳಲ್ಲಿಯೂ ಅಭಿಯಾನ ನಡೆಸಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಗುತ್ತಿದೆ. ಅಥಣಿ ತಾಲೂಕಿನಲ್ಲಿಯೂ ಶುಕ್ರವಾರದಿಂದ ಸಹಿ ಸಂಗ್ರಹಕ್ಕೆ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಲಕ್ಷಾಂತರ ಜನರು ಅಭಿಯಾನದಲ್ಲಿ ಪಾಲ್ಗೊಂಡು ಗೋಮಾತೆಯ ರಕ್ಷಣೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಡಿಸೆಂಬರ್ 17ರಂದು ಸಂಗ್ರಹಿಸಿದ ಸಹಿಗಳೊಂದಿಗೆ ಮನವಿ ಪತ್ರವನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಒತ್ತಡ ತರಲಾಗುವುದು. ಕೇಂದ್ರ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ದೇಶದ ವಿವಿಧ ಮಠಾಧೀಶರು ಹಾಗೂ ಸನ್ಯಾಸಿಗಳು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಸಂಕಲ್ಪಿಸಿದ್ದಾರೆ ಎಂದರು.ಬೆಳಗಾವಿಯ ಗೋಪ್ರೀಮಿ ಹಾಗೂ ತಥಾಸ್ತು ಗೋಶಾಲೆಯ ಡಾ.ಎನ್. ಪ್ರಶಾಂತರಾವ್ ಮಾತನಾಡಿ, ಗೋಮಾತೆಯ ಗೌರವ ಮತ್ತು ಸಂರಕ್ಷಣೆಗಾಗಿ ದೇಶಾದ್ಯಂತ ಅಭಿಯಾನ ನಡೆಯುತ್ತಿದ್ದು, ಬೆಳಗಾವಿ ಜಿಲ್ಲೆಯ 15 ತಾಲೂಕುಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖಾನಾಪುರ, ಚಿಕ್ಕೋಡಿ, ಗೋಕಾಕ, ಅಥಣಿ, ಕಾಗವಾಡ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಹಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು ಎಂಬ ಉದ್ದೇಶದಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಅಥಣಿ ಮತ್ತು ಕಾಗವಾಡ ವಲಯಗಳಿಂದ ಎರಡು ಲಕ್ಷಕ್ಕೂ ಅಧಿಕ ಜನರ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಅಥಣಿ ಪಟ್ಟಣದ ಶಿವಯೋಗಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತಗಳಲ್ಲಿ ಗೋಮಾತೆಯ ಮಹತ್ವವನ್ನು ಸಾರುವ ಮೂಲಕ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಂದ ಸಹಿ ಸಂಗ್ರಹಿಸಲಾಯಿತು.
ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಗೋವು ಕೃಷಿ, ಗ್ರಾಮೀಣ ಜೀವನ ಹಾಗೂ ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಗೋವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಅವುಗಳಿಗೆ ಸೂಕ್ತ ಆಹಾರ ಮತ್ತು ಆಶ್ರಯ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.