ಮಡಿಕೇರಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿಂದ ಸತ್ಯಾಗ್ರಹ
ಕನ್ನಡಪ್ರಭ ವಾರ್ತೆ ಮಡಿಕೇರಿರಾಷ್ಟ್ರೀಯ ಜನಗಣತಿಯ ಸಂದರ್ಭ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಸೇರಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಿತು.ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಸಿದ ಸದಸ್ಯರು, ಕೊಡವ ಯೋಧ ಕುಲಕ್ಕಾಗಿ ‘ಸೋಶಿಯಲ್ ಎಂಜಿನಿಯರಿಂಗ್’ ಪ್ರಕ್ರಿಯೆಯ ಭಾಗವಾಗಿ ಪ್ರತ್ಯೇಕ ‘ಕೋಡ್ ಮತ್ತು ಕಾಲಂ’ ಸೇರಿಸಬೇಕೆಂದು ಒತ್ತಾಯಿಸಿ ಗೃಹಮಂತ್ರಿಗಳು ಹಾಗೂ ಅವರ ಅಧೀನದಲ್ಲಿ ಬರುವ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಫ್ ಇಂಡಿಯಾ (ಆರ್‌ಜಿಸಿಸಿಐ) ಅವರಿಗೆ ಜ್ಞಾಪನಾ ಪತ್ರ ಸಲ್ಲಿಸಿದರು.ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ, ರಾಷ್ಟ್ರೀಯ ಜನಗಣತಿ ಜೊತೆಗೆ ಜಾತಿವಾರು ಜನಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ. ಸೋಶಿಯಲ್ ಎಂಜಿನಿಯರಿಂಗ್ ಸರ್ಕಾರವು ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ ಎಂದರು.ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಬೇಕು, ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವರಿಗೆ ಎಸ್ಟಿ ಟ್ಯಾಗ್ ಘೋಷಿಸಬೇಕು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು, ಕೊಡವರ ಕೋವಿ ಹಕ್ಕನ್ನು ಶಾಶ್ವತಗೊಳಿಸಬೇಕು, ಸಂಸತ್ ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ಪ್ರಾತಿನಿಧ್ಯ ನೀಡಬೇಕು, ವಿವಿಧ ಕಾರಣಗಳಿಂದ ಪರರ ಪಾಲಾಗಿರುವ ಕೊಡವ ಪೂರ್ವಜರ ಕೊಡವ ಭೂಮಿಯನ್ನು ಮರಳಿ ಕೊಡವರಿಗೆ ದೊರಕಿಸಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎನ್.ಯು.ನಾಚಪ್ಪ ಆಗ್ರಹಿಸಿದರು.ಜ್ಞಾಪನಾ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಸಲ್ಲಿಸಲಾಯಿತು.
ಅರೆಯಡ ಸವಿತಾ, ಚೋಳಪಂಡ ಜ್ಯೋತಿ, ಮುದ್ದಿಯಡ ಲೀಲಾವತಿ, ಕಲಿಯಂಡ ಪ್ರಕಾಶ್, ಆಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅಜ್ಜಿಕುಟ್ಟಿರ ಲೋಕೇಶ್, ಅರೆಯಡ ಗಿರೀಶ್, ನಂದೇಟಿರ ರವಿ ಸುಬ್ಬಯ್ಯ, ಕಾಟುಮಣಿಯಂಡ ಉಮೇಶ್, ಪುದಿಯೊಕ್ಕಡ ಪೃಥ್ವಿ, ಪುಟ್ಟಿಚಂಡ ದೇವಯ್ಯ, ಮಣೋಟ್ಟಿರ ಚಿಣ್ಣಪ್ಪ, ಕೂಪದಿರ ಸಾಬು, ಚೋಳಪಂಡ ನಾಣಯ್ಯ, ಮೇದುರ ಕಂಠಿ ಮತ್ತಿತರರು ಹಾಜರಿದ್ದರು.