- ಡಿಸಿಗೆ ಜಿಲ್ಲಾ ರೈತರ ಒಕ್ಕೂಟ ನಿಯೋಗ ಒತ್ತಾಯ । ಪ್ರತಿ ಕ್ವಿಂ.ಗೆ ₹500 ಪ್ರೋತ್ಸಾಹಧನ ಸೇರಿ ₹2820 ನೀಡಲು ಮನವಿ - - -
* ರೈತರ ಆರೋಪಗಳೇನು? - ಬೆಳೆ ಸಮೀಕ್ಷೆಯಾಗಿದ್ದರೂ ಫ್ರೂಟ್ ಐಡಿಯಲ್ಲಿ ಬೆಳೆಯ ಹೆಸರು ನಮೂದಾಗಿಲ್ಲ- ನಾಲ್ಕೈದು ದಿನಗಳಿಂದ ಕೇವಲ ಮೂವರು ರೈತರು ಮಾಹಿತಿ ಮಾತ್ರ ನೋಂದಣಿ
- ಗಡಿ ಹಳ್ಳಿಗಳ ರೈತರಿಗೆ ಆಯಾ ತಾಲೂಕು ಕೇಂದ್ರಕ್ಕೇ ಹೋಗಿ ನೋಂದಾಯಿಸೋದು ಕಷ್ಟ- ಭತ್ತ ತುಂಬಿಕೊಂಡು ತಂದ 1 ಗೋಣಿಚೀಲಕ್ಕೆ ಕೇವಲ ₹6 ದರ ನಿಗದಿ ಬಹಳ ಕಡಿಮೆಯಾಗಿದೆ
- ಒಬ್ಬ ರೈತನಿಂದ 50 ಕ್ವಿಂಟಲ್ ಭತ್ತ ಮಾತ್ರ ಖರೀದಿಸಬೇಕೆಂಬ ನಿಯಮ ಸರಿಯಲ್ಲ- - -
ಕನ್ನಡಪ್ರಭ ವಾರ್ತೆ ದಾವಣಗೆರೆ ಭತ್ತ ಖರೀದಿ ನೋಂದಣಿಗೆ ಇರುವ ಸಮಸ್ಯೆಗಳನ್ನು ಪರಿಹರಿಸಿ, ಆದಷ್ಟು ಬೇಗನೆ ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾ ರೈತರ ಒಕ್ಕೂಟ ನಿಯೋಗದಿಂದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಅರ್ಪಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಒಕ್ಕೂಟದ ಮುಖಂಡರ ನೇತೃತ್ವದಲ್ಲಿ ಭತ್ತ ಬೆಳೆಗಾರ ರೈತರು, ಜಿಲ್ಲೆಯಲ್ಲಿ ಭತ್ತ ಖರೀದಿ ನೋಂದಣಿಯಲ್ಲಿ ಇರುವಂತಹ ಸಮಸ್ಯೆಗಳನ್ನು ಪರಿಹರಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಲನ್ನು ಈಡೇರಿಸುವಂತೆ ಒತ್ತಾಯಿಸಿದರು.
ಒಕ್ಕೂಟದ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಖರೀದಿ ನೋಂದಣಿಗೆ ಫ್ರೂಟ್ ಐಡಿ (ಎಫ್‌ಐಡಿ) ದಾಖಲಗೆ ಅನುಸಾರ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಬೆಳೆ ಸಮೀಕ್ಷೆಯಾಗಿದ್ದರೂ ಫ್ರೂಟ್ ಐಡಿಯಲ್ಲಿ ಬೆಳೆಯ ಹೆಸರು ನಮೂದಾಗಿಲ್ಲ. ಖರೀದಿ ಕೇಂದ್ರದಲ್ಲಿ ಬೆಳೆ ಹೆಸರು ನಮೂದಾಗಿಲ್ಲದಿದ್ದರೆ ನೋಂದಣಿ ಮಾಡುತಿಲ್ಲ. ಹಾಗಾಗಿ, ರೈತರು ನೋಂದಣಿಗೆ ಬಂದವರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ, ಬರಿಗೈನಲ್ಲಿ ವಾಪಸಾಗುತ್ತಿದ್ದಾರೆ ಎಂದರು.ನಾಲ್ಕೈದು ದಿನಗಳಿಂದ ಕೇವಲ ಮೂವರು ರೈತರು ಮಾತ್ರ ನೋಂದಣಿ ಮಾಡಿಸಿದ್ದಾರೆ. ಇದರಿಂದ ಭತ್ತ ಖರೀದಿ ಕೇಂದ್ರ ಆರಂಭವಾಯಿತೆಂದು ನಿಟ್ಟಿಸಿರು ಬಿಟ್ಟಿದ್ದ ರೈತರಿಗೆ ಮತ್ತೆ ನಿರಾಸೆಯಾಗಿದೆ. ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಫ್ರೂಟ್ ಐಡಿಯಲ್ಲಿ ಬೆಳೆ ಹೆಸರು ನಮೂದಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಫ್ರೂಟ್ ಐಡಿಯಲ್ಲಿ ಬೆಳೆ ಹೆಸರು ನಮೂದಾಗದಿದ್ದರೂ, ನೋಂದಣಿ ಮಾಡಿಸಿಕೊಳ್ಳಬೇಕು. ತಾಲೂಕಿನ ಗಡಿಯಲ್ಲಿರುವ ಹಳ್ಳಿಗಳ ರೈತರಿಗೆ ನೋಂದಣಿಗಾಗಿ ಆಯಾ ತಾಲೂಕು ಕೇಂದ್ರಕ್ಕೆ ಹೋಗುವಂತೆ ಹೇಳುತ್ತಿದ್ದು, ಇತರಿಂದ ರೈತರಿಗೆ ತೀವ್ರ ಅನಾನುಕೂಲ ಆಗುತ್ತಿದೆ. ಸಮೀಪದ ಖರೀದಿ ಕೇಂದ್ರದಲ್ಲಿ ರೈತರಿಗೆ ನೋಂದಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಭತ್ತವನ್ನು ರೈತರು ಗೋಣಿಚೀಲದಲ್ಲಿ ತುಂಬಿಕೊಂಡು ಬಂದಾಗ 1 ಚೀಲಕ್ಕೆ ₹6 ನೀಡುವಂತೆ ದರ ನಿಗದಿಪಡಿಸಿದ್ದು, ಇದು ಬಹಳ ಕಡಿಮೆಯಾಗಿದೆ. ಪ್ರತಿ ಚೀಲಕ್ಕೆ ₹60 ನೀಡಲು ಕ್ರಮ ಕೈಗೊಳ್ಳಬೇಕು. ಒಬ್ಬ ರೈತನಿಂದ 50 ಕ್ವಿಂಟಲ್ ಭತ್ತ ಮಾತ್ರ ಖರೀದಿಸಬೇಕೆಂಬ ನಿಯಮ ಸಡಿಲಿಸಿ, ಒಬ್ಬ ರೈತನಿಂದ 200 ಕ್ವಿಂ. ಖರೀದಿಸಬೇಕು. ಕನಿಷ್ಠ ಬೆಂಬಲ ಬೆಲೆಯಡಿ ಕ್ವಿಂ. ಭತ್ತಕ್ಕೆ ₹2320 ಇದೆ. ಈ ದರಕ್ಕೆ ರಾಜ್ಯ ಸರ್ಕಾರ ₹500 ಪ್ರೋತ್ಸಾಹಧನ ಮಂಜೂರು ಮಾಡಿ, ಪ್ರತಿ ಕ್ವಿಂಟಲ್‌ಗೆ ₹2820 ದರದಂತೆ ಖರೀದಿಸಬೇಕು ಎಂದು ಒತ್ತಾಯಿಸಿದರು.ಒಕ್ಕೂಟದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ರೈತರು ಸಮೀಪದ ಯಾವುದಾದರೂ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿದರು. ಅಲ್ಲದೇ, ಫ್ರೂಟ್ ಐಡಿಯಲ್ಲಿ ಬೆಳೆ ಸಮೀಕ್ಷೆ ವಿವರ ತ್ವರಿತವಾಗಿ ದಾಖಲಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.
ರೈತರ ಒಕ್ಕೂಟದ ನಿಯೋಗದಲ್ಲಿ ಮುಖಂಡರಾದ ಮಾಜಿ ಮೇಯರ್ ಎಚ್.ಎನ್. ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ. ಗಣೇಶಪ್ಪ, ಕುರ್ಕಿ ರೇವಣಸಿದ್ದಪ್ಪ, ಐಗೂರು ಶಿವಮೂರ್ತೆಪ್ಪ, ಮಹೇಶಪ್ಪ ಇತರರು ಇದ್ದರು.- - - -9ಕೆಡಿವಿಜಿ1, 2.ಜೆಪಿಜಿ:
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಾವಣಗೆರೆಯಲ್ಲಿ ಜಿಲ್ಲಾ ರೈತರ ಒಕ್ಕೂಟದಿಂದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಅರ್ಪಿಸಲಾಯಿತು.