ಹಾಲು ಒಕ್ಕೂಟಕ್ಕೆ ಆಡಳಿತ ಅಧಿಕಾರಿ ನೇಮಿಸಲು ಆಗ್ರಹ

KannadaprabhaNewsNetwork | Published : Apr 8, 2025 12:31 AM

ಸಾರಾಂಶ

ಹಾಲು ಉತ್ಪಾದಕರಿಂದ ಕಡಿತ ಮಾಡಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಬಳ್ಳಾರಿ ಹಾಲು ಒಕ್ಕೂಟಕ್ಕೆ ಆಡಳಿತ ಅಧಿಕಾರಿ ನೇಮಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಲು ಉತ್ಪಾದಕರ ರೈತ ಹೋರಾಟ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಹಾಲು ಉತ್ಪಾದಕರಿಂದ ಕಡಿತ ಮಾಡಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಬಳ್ಳಾರಿ ಹಾಲು ಒಕ್ಕೂಟಕ್ಕೆ ಆಡಳಿತ ಅಧಿಕಾರಿ ನೇಮಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಲು ಉತ್ಪಾದಕರ ರೈತ ಹೋರಾಟ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಒಕ್ಕೂಟದ ಆಡಳಿತ ಮಂಡಳಿಯು ಕಳೆದ 2024ರ ಸೆಪ್ಟಂಬರ್ ರಿಂದ ರೈತರಿಗೆ ಸಂದಾಯ ಮಾಡಬೇಕಾದ ಹಾಲು ಖರೀದಿ ಮೊತ್ತದಲ್ಲಿ ಪ್ರತಿ ಲೀಟರ್‌ಗೆ ₹1.50 ಕಡಿತ ಮಾಡಿದೆ. ಇದರಿಂದ ಹಾಲು ಉತ್ಪಾದಕರಿಗೆ ತೀವ್ರ ಸಮಸ್ಯೆಯಾಗಿದೆ. ಹಾಲು ಖರೀದಿ ಮೊತ್ತದಲ್ಲಿ ಹಣ ಕಡಿತ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಕೂಡಲೇ ಬಾಕಿ ಇರುವ ಹಣವನ್ನು ಪಾವತಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕೆಎಂಇಆರ್‌ಸಿ ಅನುದಾನದಡಿ ಬಳ್ಳಾರಿಗೆ ಮೇಗಾ ಡೈರಿ ಸ್ಥಾಪನೆಗೆ ಮಂಜೂರಾಗಿದೆ. ಈ ಸಂಬಂಧ ಕೊಳಗಲ್ಲು ಗ್ರಾಮದ ಬಳಿ 15 ಎಕರೆ ಪ್ರದೇಶವನ್ನು ಜಾಗವನ್ನು ಸಹ ಗುರುತಿಸಲಾಗಿದೆ. ನಿಯೋಜಿತ ಯೋಜನೆಗೆ ಸಂಬಂಧಿಸಿದ ₹110 ಕೋಟಿ ಪೈಕಿ ₹82 ಕೋಟಿ ಬಿಡುಗಡೆ ಸಹ ಆಗಿದೆ. ಆದರೆ, ಒಕ್ಕೂಟದ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಮೇಗಾ ಡೈರಿ ಸ್ಥಾಪನೆಗೆ ಹಿನ್ನಡೆಯಾಗಿದೆ ಎಂದು ದೂರಿದರು.

ಕಲಬುರಗಿಯ ಸಹಕಾರ ಸಂಘಗಳ ಜಂಟಿ ನಿಬಂಧಕರು ಒಕ್ಕೂಟದ ವ್ಯವಸ್ಥಾಪಕರಿಗೆ ಪತ್ರ ಬರೆದು, ಒಕ್ಕೂಟದ ಚುನಾಯಿತ ನಿರ್ದೇಶಕರನ್ನು ನಿಗದಿಪಡಿಸುವ ವಿಷಯದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ. ಭೌಗೋಳಿಕವಾಗಿ ಪ್ರತಿ ಜಿಲ್ಲೆಗೆ 4 ರಂತೆ ನಾಲ್ಕು ಜಿಲ್ಲೆಗಳ ಸಮಾನ ಚುನಾಯಿತ ನಿರ್ದೇಶಕರನ್ನು ಒಳಗೊಂಡಂತೆ ಒಕ್ಕೂಟ ಬೈಲಾದಲ್ಲಿ ತಿದ್ದುಪಡಿ ಮಾಡಲು ಸೂಚನೆ ನೀಡಿದ್ದಾರೆ. ಆದರೆ, ಈವರೆಗೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಸ್ತುತ ಚಾಲ್ತಿಯಲ್ಲಿರುವ ಒಕ್ಕೂಟದ ಚುನಾಯಿತ ನಿರ್ದೇಶಕರ ಆಡಳಿತ ಮಂಡಳಿಯ ಅವಧಿ 2024ರ ಮೇ 15ಕ್ಕೆ ಪೂರ್ಣಗೊಳ್ಳಲಿದೆ. ಸದರಿ ಅವಧಿಯಲ್ಲಿ ಒಕ್ಕೂಟದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಒಕ್ಕೂಟಕ್ಕೆ ಆಡಳಿತ ಅಧಿಕಾರಿಯನ್ನು ನೇಮಿಸಬೇಕು ಹಾಗೂ ಕಾನೂನು ನಿಯಮ ಮೀರಿ ಕೈಗೊಂಡಿರುವ ಹಾಲು ಉತ್ಪಾದಕರಿಂದ ಪ್ರತಿ ಲೀಟರ್‌ಗೆ ₹1.50 ಹಣದ ಕಡಿತವನ್ನು 2024ರ ಸೆಪ್ಟಂಬರ್‌ವರೆಗೆ ಮುಂದುವರಿಸಿದ್ದಾರೆ. ಒಕ್ಕೂಟ ಚುನಾವಣಾ ನೀತಿ ಸಂಹಿತೆ ಇದ್ದರೂ 62 ಉದ್ಯೋಗ ಪರೀಕ್ಷಾರ್ಥಿಗಳ ಅಂತಿಮ ಅಂಕಪಟ್ಟಿ ಪ್ರಕಟಿಸಲಾಗಿದ್ದು, ತಕ್ಷಣವೇ ಆಡಳಿತ ಮಂಡಳಿ ರದ್ದುಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸಿರಿಗೇರಿ ಪನ್ನರಾಜ್, ರೈತ ಸಂಘದ ಅಧ್ಯಕ್ಷ ಮಾಧವ ರೆಡ್ಡಿ ಕರೂರು, ವಿ.ಎಸ್. ಶಿವಶಂಕರ್, ವೆಂಕಟೇಶ್ ಹೆಗಡೆ, ಗಾದೆಪ್ಪ, ಹನುಮಂತಪ್ಪ, ಸತ್ಯಬಾಬು, ಚಂದ್ರಕುಮಾರಿ, ತಿಮ್ಮಪ್ಪ ಜೋಳದರಾಶಿ, ಜಗನ್ನಾಥ್, ಸಿದ್ದೇಶ್ ಜೋಗಿನ ಚಂದ್ರಪ್ಪ, ಜೆ.ಎನ್. ಮಂಜುನಾಥ, ಎಂ.ಭಾಸ್ಕರ್, ಟಿ.ಜಿ. ವಿಠಲ್ ಸೇರಿದಂತೆ ನಗರದ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Share this article