ಕನ್ನಡಪ್ರಭ ವಾರ್ತೆ ಲೋಕಾಪುರ
ವೆಂಕಟಾಪುರದ ಶ್ರೀ ಕಾಶಿಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಸೋಮವಾರ ಪಟ್ಟಣದ ವೆಂಕಟಾಪುರದ ಕಾಶಿಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ವತಿಯಿಂದ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸಮುದಾಯ ಭವನದ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತರಿಗೆ ನೀರು ಮತ್ತು ವಿದ್ಯುತ್ ಅವಶ್ಯಕತೆ ಇದೆ. ರೈತರ ಅನುಕೂಲಕ್ಕಾಗಿ ನಾನು ಆದ್ಯತೆ ಕೊಟ್ಟಿದ್ದೇನೆ. ಶೀಘ್ರದಲ್ಲಿ ಚಿತ್ರಭಾನುಕೋಟಿ ಗ್ರಾಮದಲ್ಲಿ ೪೦೦ ಕೆವಿ ವಿದ್ಯುತ್ ಘಟಕದ ಅಡಿಗಲ್ಲು ಮಾಡುವುದಾಗಿ ಭರವಸೆ ನೀಡಿದರು.
ಮುಧೋಳ ನಗರದಲ್ಲಿ ₹೧೭೭ ಕೋಟಿ ವೆಚ್ಚದಲ್ಲಿ ೨೪/೭ ತಾಸು ಕುಡಿಯುವ ನೀರು ಹಾಗೂ ತಾಯಿ-ಮಕ್ಕಳ ಆಸ್ಪತ್ರೆ ಯೋಜನೆಗಳು ತರಲಾಗಿದೆ ಎಂದು ತಿಳಿಸಿದರು.ಲೋಕಾಪುರ ಪಟ್ಟಣ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಎಲ್ಲರ ಜೊತೆ ಚರ್ಚೆ ಮಾಡಿ ಮೂಂದಿನ ದಿನಗಳಲ್ಲಿ ಲೋಕಾಪುರ ಪಟ್ಟಣದ ನೀಲನಕ್ಷೆ ತಯಾರಿಸಿ ಪಟ್ಟಣದ ಇನ್ನಷ್ಟು ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿದರು.
ಸಚಿವರಿಗೆ ಮನವಿ: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತ ನಿರ್ಮಾಣ ಮಾಡಲು ಕಾಶಿಲಿಂಗೇಶ್ವರ ದೇವಸ್ಥಾನ ಭಕ್ತರು ಹಾಗೂ ಹಾಲುಮತ ಸಮಾಜದವರು ಸಚಿವರಿಗೆ ಮನವಿ ಸಲ್ಲಿಸಿದರು.ಸಚಿವರಿಗೆ ಸನ್ಮಾನ: ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರನ್ನು ಕಾಶಿಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.
ದೇವಸ್ಥಾನ ಅರ್ಚಕರಾದಸಿದ್ದಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಲೋಕಣ್ಣ ಕೊಪ್ಪದ, ಗೋವಿಂದಪ್ಪ ಕೌಲಗಿ, ಆನಂದ ಹಿರೇಮಠ, ಹೊಳಬಸು ದಂಡಿನ, ಸೋಮರಾಯ ತುಂಗಳ, ಸಿದ್ದಪ್ಪ ಹರಕಂಗಿ, ನಾಗಪ್ಪ ಗುಡ್ಡದ, ಮಾಯಪ್ಪ ಗಡ್ಡದವರ, ತಿಪ್ಪಣ್ಣ ಕಿಲಾರಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಅಬ್ದುಲ್‌ರಹೆಮಾನ ತೊರಗಲ್, ಕುಮಾರ ಪತ್ತಾರ, ಸುಲ್ತಾನ ಕಲಾದಗಿ, ಕಾಶಿಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಅದ್ಯಕ್ಷ ಮುತ್ತಪ್ಪ ಗಡ್ಡದವರ, ಕಾರ್ಯದರ್ಶಿ ಬಾಳು ಗಡ್ಡದವರ, ಸಿಂಗಾಡೆಪ್ಪ ಗಡ್ಡದವರ, ಸಿದ್ದು ಕಿಲಾರಿ, ಭಕ್ತಾಧಿಗಳು, ಯುವಕರು, ಮಹಿಳೆಯರು, ಮಕ್ಕಳು ಇದ್ದರು. ಶಿಕ್ಷಕ ಮುತ್ತು ತುಂಗಳ ನಿರೂಪಿಸಿದರು.