ಯಲಬುರ್ಗಾ: ತಾಲೂಕಿನ ಗಾಣಧಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪಟ್ಟಣದ ಬಿಇಒ ಕಚೇರಿಯ ದೈಹಿಕ ಪರಿವೀಕ್ಷಕ ವೀರಭದ್ರಪ್ಪ ಅಂಗಡಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಮಾರುತಿ ಹೆಗಡೆ ಮಾತನಾಡಿ, ಚಿಕ್ಕಮನ್ನಾಪುರ ಶಾಲೆಯ ಶಿಕ್ಷಕರನ್ನು ಡೆಪ್ಯೂಟಿ ಎಂದು ನೇಮಕ ಮಾಡಿರುವುದರಿಂದ ಅವರನ್ನು ಗಾಣಧಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ನೇಮಕಾತಿ ಮಾಡಬೇಕು. ಅಲ್ಲದೆ ಶಾಲೆಗೆ ಇನ್ನೂ ೧೦ ಜನ ಸರ್ಕಾರಿ ಶಿಕ್ಷಕರನ್ನು ಕಳುಹಿಸಿ ಕೊಡಬೇಕು. ಶಾಲೆಗೆ ಮೂಲ ಸೌಕರ್ಯ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಹನುಮಗೌಡ ಮಾಲಿಪಾಟೀಲ್, ಜಿಲ್ಲಾಧ್ಯಕ್ಷ ಶಂಕ್ರಪ್ಪ ತಳವಾರ್, ಅಮರೇಶ ಪೊಲೀಸ್ ಗೌಡ, ಮಲ್ಲಪ್ಪ ಲಕ್ಕಲಕಟ್ಟಿ, ಮರಿಯಪ್ಪ ತಳವಾರ್ ಸೇರಿದಂತೆ ಮತ್ತಿತರು ಇದ್ದರು.