ಕೂಡಲ ಸಂಗಮ ಶ್ರೀಗಳ ಉಚ್ಚಾಟನೆ ಸನ್ನಿವೇಶ ಇಲ್ಲ

KannadaprabhaNewsNetwork |  
Published : Jul 21, 2025, 12:00 AM IST
20ಕೆಡಿವಿಜಿ7-ಪಂಚಮಸಾಲಿ ಸಮಾಜದ ಹಿರಿಯ ಮುಖಂಡ, ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ. | Kannada Prabha

ಸಾರಾಂಶ

ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷರ ಬದಲಾವಣೆ ಪರಿಸ್ಥಿತಿ, ಸನ್ನಿವೇಶ ಉದ್ಭವಿಸಿಲ್ಲ. ಏನೇ ಸಮಸ್ಯೆ ಇದ್ದರೂ ಕುಳಿತು ಪರಿಹರಿಸೋಣ ಎಂದು ಸ್ಪಷ್ಟವಾಗಿ ಹೇಳಿರುವುದಾಗಿ ಹರಿಹರ ಮಾಜಿ ಶಾಸಕ, ಪಂಚಮಸಾಲಿ ಸಮಾಜದ ಹಿರಿಯ ನಾಯಕ ಎಚ್.ಎಸ್.ಶಿವಶಂಕರ ಹೇಳಿದ್ದಾರೆ.

- ಹರಿಹರ ಮಾಜಿ ಶಾಸಕ ಶಿವಶಂಕರ ಹೇಳಿಕೆ । ಕಾಶೆಪ್ಪನವರ ಜತೆ ಚರ್ಚಿಸಿದ್ದೇನೆ, ಕುಳಿತು ಸಮಸ್ಯೆ ಪರಿಹರಿಸುತ್ತೇವೆ: ಅಭಯ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷರ ಬದಲಾವಣೆ ಪರಿಸ್ಥಿತಿ, ಸನ್ನಿವೇಶ ಉದ್ಭವಿಸಿಲ್ಲ. ಏನೇ ಸಮಸ್ಯೆ ಇದ್ದರೂ ಕುಳಿತು ಪರಿಹರಿಸೋಣ ಎಂದು ಸ್ಪಷ್ಟವಾಗಿ ಹೇಳಿರುವುದಾಗಿ ಹರಿಹರ ಮಾಜಿ ಶಾಸಕ, ಪಂಚಮಸಾಲಿ ಸಮಾಜದ ಹಿರಿಯ ನಾಯಕ ಎಚ್.ಎಸ್.ಶಿವಶಂಕರ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯ ಕೂಡಲಸಂಗಮಕ್ಕೆ ಸೋಮವಾರವೇ ಭೇಟಿ ನೀಡುತ್ತಿದ್ದೇವೆ. ಅಲ್ಲಿನ ಸಮಾಜದ ಮುಖಂಡರ ಜೊತೆಗೆ ಚರ್ಚಿಸಲಿದ್ದೇವೆ. ಸಮಾಜದ ನಾಯಕರಿಗೆ ಸಮಸ್ಯೆ ಬಂದಾಗ ಬೆನ್ನಿಗೆ ನಿಲ್ಲುವುದು ಸಹಜ ಸ್ವಾಭಾವಿಕವೂ ಆಗಿದೆ. ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ- ವಿಜಯಾನಂದ ಕಾಶೆಪ್ಪನವರ್ ವಿಚಾರ ಬಂದಾಗ ಇಬ್ಬರ ಪರವಾಗಿಯೂ ಕೂಡಲ ಸಂಗಮದ ಪೀಠಾಧಿಪತಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನಿಂತಿದ್ದಾರೆ. ಇದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.

ಕೆಲವು ಸಣ್ಣಪುಟ್ಟ ವಿಚಾರ, ವೈಮನಸ್ಸಿನ ವಿಚಾರಗಳನ್ನು ದೊಡ್ಡದು ಮಾಡಿ, ಪೆಟ್ಟು ಕೊಡುವುದು ಸರಿಯಲ್ಲ. ನಾನೇ ಮಧ್ಯ ಪ್ರವೇಶ ಮಾಡುತ್ತೇನೆ, ಪರಿಹಾರವನ್ನೂ ಮಾಡುತ್ತೇವೆ. ಪರ್ಯಾಯ ವ್ಯವಸ್ಥೆಯ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಸ್ವಾಮೀಜಿ ಉಚ್ಚಾಟನೆ ಸನ್ನಿವೇಶವೂ ಇಲ್ಲ. ಮರೆವು ಮನುಷ್ಯನ ಸಹಜ ಗುಣವಾಗಿದೆ. ಹಾಗಾಗಿ, ಇದು ಇಲ್ಲದಿದ್ದರೆ ದ್ವೇಷ, ಅಸೂಯೆ ಅಷ್ಟೇ ಉಳಿಯುತ್ತದೆ ಎಂದು ಹೇಳಿದರು.

ಮಠದಲ್ಲಿ ಅನೈತಿಕ ಚಟುವಟಿಕೆ ಸುಳ್ಳು:

ಸಮಾಜದ ಎಲ್ಲರ ಪರವಾಗಿಯೂ ಸ್ವಾಮೀಜಿ ನಿಂತಿದ್ದಾರೆ. ಸಮಸ್ಯೆಗಳೇ ಇಲ್ಲದ ಯಾವುದೇ ಮಠಗಳಾಗಲೀ, ಪೀಠಗಳಾಗಲೀ, ರಾಜಕೀಯ ಪಕ್ಷಗಳಾಗಲೀ, ನಾಯಕರಾಗಲೀ ಇಲ್ಲ. ಶ್ರೀಮಠದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತದೆ ಎಂಬುದೆಲ್ಲಾ ಸುಳ್ಳು. ಸ್ವಾಮೀಜಿ ಭೇಟಿಯಾಗಲು ನಾಡಿನ ವಿವಿಧೆಡೆಯಿಂದ ಭಕ್ತರು, ಜನರು ಬರುತ್ತಾರೆ. ಅಲ್ಲಿ ಶಾಲೆಯೂ ಇದೆ, ಅಡುಗೆ ಮಾಡುವ ಕೆಲಸಗಾರರೂ ಇದ್ದಾರೆ. ಅನೈತಿಕ, ಅಕ್ರಮ ನಡೆದಿರುವ ಉದಾಹರಣೆಯೇ ಇಲ್ಲ. ಶ್ರೀಗಳನ್ನು ಗುರಿ ಮಾಡಿಕೊಂಡು, ದ್ವೇಷದ ಹೇಳಿಕೆ ನೀಡಲು ಅಸ್ತ್ರ ಮಾಡಿಕೊಂಡಿದ್ದಾರಷ್ಟೇ ಎಂದು ಟೀಕಿಸಿದರು.

- - -

(ಬಾಕ್ಸ್‌) * ಪೀಠದ ಹೆಸರಿನಲ್ಲಿ ರಾಜಕೀಯ ಮಾಡಬೇಡಿ: ಶಿವಶಂಕರ

ದಾವಣಗೆರೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ವಿಜಯಾನಂದ ಕಾಶೆಪ್ಪನವರ್ ಮಧ್ಯೆ ವೈಮನಸ್ಸು ಉಂಟಾಗಿ, ಶ್ರೀಮಠಕ್ಕೆ ವಿಜಯಾನಂದ ಕಾಶೆಪ್ಪನವರ್ ಬೀಗ ಜಡಿದ ಘಟನೆಗೆ ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ತೀವ್ರ ಬೇಸರ ವ್ಯಕ್ತಪಡಿಸಿದರು.

ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್ ಮಧ್ಯೆ ರಾಜಕೀಯ ವೈಷಮ್ಯದಿಂದ ಈ ಬೆಳವಣಿಗೆಯಾಗಿದೆ. ಕಾಶಪ್ಪನವರ್ ಮತ್ತು ಯತ್ನಾಳ್ ನಡುವಿನ ರಾಜಕೀಯ ವ್ಯತ್ಯಾಸ ಪೀಠದ ಮೇಲೆ ಪರಿಣಾಮ ಬೀರಿದ್ದರಲ್ಲಿ ಎರಡು ಮಾತಿಲ್ಲ. ನೀವು ಏನಾದರೂ ರಾಜಕೀಯ ಮಾಡಿ, ಯಾರೂ ನಿಮಗೆ ಬೇಡ ಎನ್ನುವುದಿಲ್ಲ. ಆದರೆ, ಪೀಠದ ಹೆಸರಲ್ಲಿ ರಾಜಕೀಯ ಮಾಡಬೇಡಿ ಎಂದು ತಿಳಿಸಿದರು.

ಸಂದರ್ಭ ಬಂದರೆ ಸ್ವಾಮೀಜಿಗೆ ಉಚ್ಚಾಟಿಸುತ್ತೇವೆಂದು ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ರಾಜಕೀಯ ಗೊಂದಲಗಳಿಂದ ಗೂಬೆ ಕೂರಿಸುವ ಕೆಲಸ ಮಾಡಬೇಡಿ. ಮಠಕ್ಕೆ ಬೀಗ ಹಾಕಿಸಿದ್ದಾಗಲೀ, ರಾಜಕೀಯವಾಗಿ ಶ್ರೀಗಳ ವಿರುದ್ಧ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕಾಶಪ್ಪನವರ್ ಜೊತೆ ಮಾತನಾಡಿದ್ದೇನೆ. ಕೂತು ಮಾತನಾಡೋಣ ಎಂದಿದ್ದೇನೆ. ಸಮಸ್ಯೆ ಪರಿಹಾರವಾಗುವ ವಿಶ್ವಾಸವೂ ಇದೆ ಎಂದು ಹೇಳಿದರು.

ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ವಿಜಯಾನಂದ ಕಾಶಪ್ಪನವರ್ ಕರೆದುಕೊಂಡಿರಬಹುದು. ಶ್ರೀಗಳು ಸಮಾಜ ಸಂಘಟನೆ ಮಾಡಿದ್ದಾರೆ. ಸಮಾಜವನ್ನು ಬಲಿಷ್ಠವಾಗಿ ಕಟ್ಟಿದ್ದಾರೆ. ಪ್ರತ್ಯೇಕ ಮಠವನ್ನೇನೂ ಸ್ವಾಮೀಜಿ ಕಟ್ಟಿಲ್ಲ. 2ಎ ಮೀಸಲಾತಿಗಾಗಿ ಐತಿಹಾಸಿಕ ಪಾದಯಾತ್ರೆ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಸಾಕಷ್ಟು ಹೇಳಿಕೆ ನೀಡಿ, ಹೋರಾಟ ಮಾಡಿದರು. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಮ್ಮ ಹಕ್ಕು ಕೊಡಲಿಲ್ಲ. ಈ ಸರ್ಕಾರದ ವಿರುದ್ಧವೂ ಹೋರಾಟ ಮಾಡಿದ್ದಾರೆ. ಕಾಂಗ್ರೆಸ್‌ನವರು 2ಎ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. 2ಎ ಮೀಸಲಾತಿ ನೀಡುತ್ತೇವೆಂಬ ಭರವಸೆ ಭರವಸೆಯಾಗಿಯೇ ಉಳಿದಿದೆ. ಸಮಾಜದ ಪರ ಧ್ವನಿ ಎತ್ತಿದವರು, ಹೋರಾಟ ಮಾಡಿದವರ ಮಧ್ಯೆ ವ್ಯತ್ಯಾಸ ಬಂದಿದೆ ಎಂದು ಎಚ್.ಎಸ್. ಶಿವಶಂಕರ ಬೇಸರಿಸಿದರು.

- - -

-20ಕೆಡಿವಿಜಿ7.ಜೆಪಿಜಿ: ಎಚ್.ಎಸ್.ಶಿವಶಂಕರ.

PREV

Latest Stories

ಜಾಗತಿಕ ತಂತ್ರಜ್ಞಾನ ಶ್ರೇಷ್ಠತೆಗೆ ನೋವಿಗೋ ಸೊಲ್ಯೂಷನ್ಸ್
ಡಿಸಿ ಖಾತೆಯಲ್ಲಿ ಬಳಕೆಯಾಗದ ಮೊತ್ತ ವಾಪಸಿಗೆ ಗಡಿ ಪ್ರಾಧಿಕಾರ ಸಿಎಸ್‌ಗೆ ದೂರು
ಜಲ ಜೀವನ್ ಮಿಷನ್, ನರೇಗಾ ಕಾಮಗಾರಿ ಪರಿಶೀಲನೆ