ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಶಿಕ್ಷೆಗೊಳಪಡಿಸಲು ಆಗ್ರಹ

KannadaprabhaNewsNetwork | Published : May 28, 2024 1:08 AM

ಸಾರಾಂಶ

ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪ್ರಕರಣ ಬೆಳಕಿಗೆ ಬಂದು ತಿಂಗಳಾದರೂ ಆರೋಪಿಯನ್ನು ಬಂಧಿಸದಿರುವುದು ಖಂಡನೀಯ. ಕೂಡಲೇ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ, ಶಿಕ್ಷೆಗೊಳಪಡಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು.

ಹಾವೇರಿ: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪ್ರಕರಣ ಬೆಳಕಿಗೆ ಬಂದು ತಿಂಗಳಾದರೂ ಆರೋಪಿಯನ್ನು ಬಂಧಿಸದಿರುವುದು ಖಂಡನೀಯ. ಕೂಡಲೇ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ, ಶಿಕ್ಷೆಗೊಳಪಡಿಸಬೇಕು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು.ನಗರದ ಪತ್ರಿಕಾಭವನದಲ್ಲಿ ಸೋಮವಾರ ಸಮಾನ ಮನಸ್ಕ ಜನಪರ ಸಂಘಟನೆಗಳ ಒಕ್ಕೂಟದಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಕೂಡಲೇ ರದ್ದುಪಡಿಸಿ, ಇಂಟರ್ ಪೋಲ್ ಸಹಾಯ ಪಡೆದು ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಲ್ಲಿ ಬಂಧಿಸಲು ರಾಜ್ಯ ಸರ್ಕಾರಕ್ಕೆ ಹಾಗೂ ಎಸ್‌ಐಟಿಗೆ ಅಗತ್ಯ ನೆರವು ನೀಡಬೇಕು ಎಂದರು. ವಿಕೃತ ಲೈಂಗಿಕ ಹಗರಣದ ವಿಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್ ಡ್ರೈವ್, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮುಖಾಂತರ ಸಾರ್ವಜನಿಕವಾಗಿ ಹಂಚಲು ಸಂಚು ನಡೆಸಿದ, ವ್ಯಾಪಕವಾಗಿ ಹಂಚಿದ ಮತ್ತು ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಮೂಲಕ ಮಹಿಳೆಯರ ಖಾಸಗಿತನ, ಕುಟುಂಬ, ಬದುಕಿನ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬ ಅಪರಾಧಿಯನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಮೇಲೆ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಲಿಂಗತ್ವ ಅಲ್ಪಸಂಖ್ಯಾತ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಮಾತನಾಡಿ, ಈ ಲೈಂಗಿಕ ಹಗರಣದಲ್ಲಿ ವಿವಿಧ ಬಗೆಯ ಲೈಂಗಿಕ ದುರ್ಬಳಕೆಗೆ ಒಳಗಾಗಿರುವ ಹಾಗೂ ಪ್ರಕರಣ ದಾಖಲಿಸಲು ಮುಂದಾಗುವ ಮಹಿಳೆಯರ ಗೌಪ್ಯತೆ ಕಾಪಾಡಲು, ಅವರಿಗೆ ಬೇಕಾದ ಮನೋವೈದ್ಯಕೀಯ ಅಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರವನ್ನು ತುರ್ತಾಗಿ ನೀಡಬೇಕು ಎಂದರು.ವಿಶೇಷ ತನಿಖಾ ತಂಡವು ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪ್ರಭಾವಕ್ಕೆ ಒಳಗಾಗದೇ, ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದನ್ನು ಖಾತ್ರಿ ಪಡಿಸುವ ಗುರುತರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ. ಹೀಗಾಗಿ ಆಮೂಲಾಗ್ರವಾಗಿ, ನಿರ್ಭೀತಿಯಿಂದ ತನಿಖೆ ನಡೆಸಲು ಬೇಕಾದ ಅಧಿಕಾರವನ್ನು ಮತ್ತು ಅನುಕೂಲಗಳನ್ನು ಎಸ್‌ಐಟಿ ಮುಖ್ಯಸ್ಥರಿಗೆ ಸರ್ಕಾರವು ನೀಡಬೇಕು ಎಂದರು.ಇದೇ ಸಂದರ್ಭದಲ್ಲಿ ಮೇ ೩೦ರಂದು ಹಾಸನದಲ್ಲಿ ನಡೆಯಲಿರುವ ಹೋರಾಟದ ನಡಿಗೆ ಹಾಸನದ ಕಡೆಗೆ ರಾಜ್ಯ ಮಟ್ಟದ ಬೃಹತ್ ಹೋರಾಟದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಸುರೇಶ ಚಲವಾದಿ, ಶಿವಬಸಪ್ಪ ಗೋವಿ, ಬಸವರಾಜ ಹಾದಿಮನಿ, ಬಸವರಾಜ ಎಸ್, ಶೆಟ್ಟಿ ವಿಭೂತಿ, ಅಶೋಕ ಮರೆಣ್ಣನವರ, ಎನ್.ಆರ್ ಅಬಲೂರು, ಲಕ್ಷ್ಮಣ ಕೆಂಗಳಪ್ಪನವರ, ಸಿದ್ದು ಮರೆಮ್ಮನವರ ಇದ್ದರು.

Share this article