ಹಾನಗಲ್ಲ: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಜಿಲ್ಲಾ ಚಲವಾದಿ ಮಹಾಸಭಾ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ತಹಸೀಲ್ದಾರ್ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.ತಾಲೂಕಿನ ಇನಾಂನೀರಲಗಿ ಗ್ರಾಮದ ಅಣ್ಣಪ್ಪ ಪಡವೇಶಪ್ಪ ಕ್ಯಾಸನೂರ ಎಂಬ ವ್ಯಕ್ತಿ ಗಣೇಶ ಹಬ್ಬದ ಸಲುವಾಗಿ ತಳಿರುತೋರಣ ತರಲು ಹೊಲಕ್ಕೆ ಹೋದಾಗ ಹೊಲದ ಮಾಲೀಕರು ಅವೈಜ್ಞಾನಿಕವಾಗಿ ಬೇಲಿಗೆ ಅಳವಡಿಸಿದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನು. ಅಂದೇ ಮೃತನ ಸಂಬಂಧಿಕರು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 15 ದಿನಗಳಾದರೂ ಆರೋಪಿಗಳನ್ನು ಬಂಧಿಸದೇ ಇದ್ದ ಕಾರಣ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಚಲುವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮಡ್ಲೇರ ಮಾತನಾಡಿ, ದಲಿತರ ಮೇಲೆ ಆದ ತೊಂದರೆಗಳಿಗೆ ಇಲಾಖೆಗಳು ಹಾಗೂ ಸರ್ಕಾರ ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ದಲಿತರ ಮೇಲಾಗುವ ಅನ್ಯಾಯಕ್ಕೆ ಕೊನೆ ಇಲ್ಲದಂತಾಗುತ್ತದೆ.
ಹಾವೇರಿ: ಯುವಕನೋರ್ವ ನಿರ್ಮಾಣ ಹಂತದ ಕಟ್ಟಡದ ಗೋಡೆಗೆ ನೀರು ಹೊಡೆಯುವಾಗ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿರುವ ಘಟನೆ ಸ್ಥಳೀಯ ಉದಯನಗರದಲ್ಲಿ ನಡೆದಿದೆ.
ಸ್ಥಳೀಯ ಉದಯನಗರ ನಿವಾಸಿ ಮಂಜುನಾಥ ದೊಡ್ಡಗೌಡ್ರ(18) ಮೃತ ದುರ್ದೈವಿ. ಈತ ಹಾವೇರಿಯ ಉದಯನಗರ ಗಣಪತಿ ದೇವಸ್ಥಾನ ಬಳಿ ನಿರ್ಮಾಣ ಮಾಡುತ್ತಿರುವ ಮನೆಯ ಮೇಲ್ಮಹಡಿ ಗೋಡೆಗೆ ನೀರು ಹೊಡೆಯುವಾಗ ಆಕಸ್ಮಿಕವಾಗಿ ಕರೆಂಟ್ ಶಾಕ್ ಹೊಡೆದ ಪರಿಣಾಮ ಬಿದ್ದಿದ್ದಾನೆ. ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದನ್ನು ಖಚಿತಪಡಿಸಿರುವುದಾಗಿ ಮೃತನ ತಂದೆ ಶಂಭುಲಿಂಗಪ್ಪ ದೊಡ್ಡಗೌಡ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.