ಹರಗಿನಡೋಣಿ ಗ್ರಾಮದಲ್ಲಿ ಕೆರೆ ನಿರ್ಮಿಸಲು ಒತ್ತಾಯ

KannadaprabhaNewsNetwork |  
Published : Mar 14, 2026, 02:00 AM IST
ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದಲ್ಲಿ ಕೆರೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಗಣಿಬಾಧಿತ ಪರಿಸರ ಮತ್ತು ಜನಪದ ಹೋರಾಟ ಸಮಿತಿಯ ಜಿಲ್ಲಾ ಪ್ರಮುಖರು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕೂಡಲೇ ಗ್ರಾಮಸ್ಥರ ಕೋರಿಕೆಯಂತೆ ಕೆರೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು

ಬಳ್ಳಾರಿ: ತಾಲೂಕಿನ ಹರಗಿನಡೋಣಿ ಗ್ರಾಮಕ್ಕೆ ಕುಡಿಯುವ ನೀರಿನ ಕೆರೆ ನಿರ್ಮಿಸುವಂತೆ ಕೋರಿ ಗಣಿಬಾಧಿತ ಪರಿಸರ ಮತ್ತು ಜನಪದ ಹೋರಾಟ ಸಮಿತಿಯ ಜಿಲ್ಲಾ ಪ್ರಮುಖರು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಈ ವರೆಗೆ ಪೂರಕ ಕ್ರಮಗಳನ್ನು ಕೈಗೊಂಡಿಲ್ಲ. ಗ್ರಾಮದಲ್ಲಿ ಕೆರೆ ನಿರ್ಮಿಸುವುದಾಗಿ ಹೇಳಿದ್ದ ಭರವಸೆ ಈಡೇರಿಲ್ಲ. ಇದರಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದ್ದು, ಜಿಲ್ಲಾಧಿಕಾರಿ ಕೂಡಲೇ ಗ್ರಾಮಸ್ಥರ ಕೋರಿಕೆಯಂತೆ ಕೆರೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಕುಡಿಯುವ ನೀರಿಗೆ ಎಲ್ಲೂ ಕೊರತೆಯಾಗದಂತೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿರುವುದರಿಂದ ಕುಡಿಯುವ ನೀರಿಗೆ ಹೆಚ್ಚು ಸಮಸ್ಯೆಯಾಗಲಿಕ್ಕಿಲ್ಲ. ಹರಗಿನಡೋಣಿ ಗ್ರಾಮಸ್ಥರ ಒತ್ತಾಸೆಯಂತೆ ಕೆರೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಗ್ರಾಮದ ಜನರ ಬೇಡಿಕೆಯಿಂತೆ ಕೆರೆ ಕಟ್ಟಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಹೋರಾಟ ಸಮಿತಿಯ ರಾಜ್ಯ ಸಂಚಾಲಕಿ ಡಿ. ನಾಗಲಕ್ಷ್ಮೀ ಹಾಗೂ ರಾಜ್ಯ ಸಮಿತಿ ಸದಸ್ಯ ಆರ್. ಸೋಮಶೇಖರಗೌಡ ಮಾತನಾಡಿ, ಹರಗಿನಡೋಣಿ ಗ್ರಾಮದ ಸುತ್ತಮುತ್ತಲ ಕೈಗಾರಿಕೆಗಳಿಂದ ಆಗುತ್ತಿರುವ ವಾಯುಮಾಲಿನ್ಯ ತಪ್ಪಿಸಬೇಕು. ಕೂಡಲೇ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಗಣಿಬಾಧಿತ ಗ್ರಾಮವಾಗಿರುವುದರಿಂದ ಸ್ಥಳೀಯ ವಸತಿ ಹೀನರಿಗೆ ವಸತಿ ಸೌಕರ್ಯ, ಮಹಿಳೆಯರಿಗೆ ಕರಕುಶಲ ಕೆಲಸ ನೀಡಬೇಕು. ಬೆಳಗಲ್ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಈವರೆಗೆ ಆರಂಭಿಸಿಲ್ಲ. ಕೂಡಲೇ ಆಸ್ಪತ್ರೆ ಆರಂಭಕ್ಕೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು. ಎಐಯುಟಿಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಮುಖಂಡರಾದ ಚಂದ್ರಪ್ಪ, ಲಕ್ಷ್ಮೀ, ಎಗ್ಗೆ ಶಿವರಾಮ, ಆಲ್ದಳ್ಳಿ ರಮೇಶ್, ಯಂಕಾರೆಡ್ಡಿ ಮತ್ತಿತರರಿದ್ದರು.

ಗಣಿಬಾಧಿತ ಪರಿಸರ, ಜನಪದ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ರಂಗಭೂಮಿ ಕಲಾವಿದ ರಮೇಶಗೌಡ ಪಾಟೀಲ್ ಇನ್ನಿಲ್ಲ
ಸೋಮವಾರದಿಂದಲೇ ತಂಬಾಕುಖರೀದಿ: ಕೇಂದ್ರ ಸರ್ಕಾರ ಭರವಸೆ