ಹಾವೇರಿ: ನೀಟ್ ಯುಜಿ-2026 ಪ್ರಶ್ನೆಪತ್ರಿಕೆ ಸೋರಿಕೆ ತನಿಖೆಗೆ ಆಗ್ರಹಿಸಿ, ನೀಟ್ ಪರೀಕ್ಷೆ ರದ್ದುಗೊಳಿಸಲು ಹಾಗೂ ಎನ್‌ಟಿಎ ಸಂಸ್ಥೆಯ ಮೇಲೆ ಕ್ರಮಕೈಗೊಳ್ಳಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ನಗರದ ಮೈಲಾರ ಮಹಾದೇವಪ್ಪ ವೃತ್ತದ ಎದುರು ಪ್ರತಿಭಟನೆ ನಡೆಸಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇದರಲ್ಲಿ ಭಾಗಿಯಾದವರ ಪಾತ್ರದ ಬಗ್ಗೆ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಗೆ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಿ, ತನಿಖೆ ಮಾಡಬೇಕು. ಎನ್‌ಟಿಎ ರದ್ದು ಪಡಿಸಬೇಕು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮದ ನೇರ ಹೊಣೆಯನ್ನು ಕೇಂದ್ರ ಸರ್ಕಾರದ ಶಿಕ್ಷಣ ಸಚಿವರು ಹೊತ್ತು, ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಎಸ್‌ಎಫ್‌ಐ ಮುಖಂಡ ಅರುಣ್ ನಗವತ್ ಮಾತನಾಡಿ, ಪ್ರತಿ ವರ್ಷ ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡಕುಟುಂಬದ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆಯಲು ವಂಚಿತರಾಗುತ್ತಿದ್ದಾರೆ. ಕೂಡಲೇ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಎನ್‌ಟಿಎ ರದ್ದುಪಡಿಸಲು ಮತ್ತು ಈ ವರೆಗಿನ ಎಲ್ಲ ಹಗರಣಗಳನ್ನು ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಎಸ್‌ಎಫ್‌ಐ ಜಿಲ್ಲಾ ಮುಖಂಡ ಕೃಷ್ಣ ನಾಯ್ಕ, ರಘು ಅಂಗಡಿ, ಶಶಿಕಲಾ ದೊಡ್ಡಮನಿ, ನಂದ ಎಚ್., ಸಿಂಚನಾ ಮಲ್ಲಣ್ಣನವರ, ಶಶಿಕಲಾ ಎಂ., ಸರಸ್ವತಿ ತಳವಾರ, ಲಲಿತಾ ಪೂಜಾರ, ತೇಜಸ್ವಿನಿ ಮಳಾಪುರ, ಭಾಗ್ಯಶ್ರೀ ಪಾಟೀಲ, ಉಮ್ಮುಲ್ವರ ತಂಡೂರ, ದೀಕ್ಷಾ ಬಂಕಾಪುರ, ಮಧು ವರ್ದಿ, ಸೃಷ್ಟಿ ದೇವಗಿರಿ, ಫರ್ಹಾನ್ ಧಾರದವರ್, ಸುನಿಲ್ ಟಿ., ಮನೋಜ ಚೌಡಮ್ಮನವರ್, ನಂಜುಂಡಿ ಸುಡಂಬಿ ಪಾಲ್ಗೊಂಡಿದ್ದರು.