ಬಿಸಿಲ ತಾಪದಿಂದ ಬಳಲುತ್ತಿದ್ದ ಪೊಲೀಸ್ ಶ್ವಾನಗಳಿಗೆ ಏರ್‌ ಕೂಲರ್‌!

KannadaprabhaNewsNetwork |  
Published : May 14, 2026, 01:00 AM IST
ಹಾವೇರಿ ಪೊಲೀಸ್ ಇಲಾಖೆ ಶ್ವಾನದಳದ ಶ್ವಾನಗಳಿರುವ ಕೊಠಡಿಗಳಿಗೆ ಏರ್‌ ಕೂಲರ್‌ ವ್ಯವಸ್ಥೆ ಮಾಡಿರುವುದನ್ನು ಎಸ್ಪಿ ಯಶೋದಾ ವಂಟಗೋಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ತಾಪಮಾನ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿರುವ ನಾಲ್ಕು ಪೊಲೀಸ್‌ ಶ್ವಾನಗಳಿಗೆ ಪ್ರತ್ಯೇಕವಾಗಿ ನಾಲ್ಕು ಏರ್ ಕೂಲರ್ ವ್ಯವಸ್ಥೆ ಮಾಡಲಾಗಿದೆ. ಶ್ವಾನಕ್ಕೆ ನೀಡುವ ಆಹಾರದಲ್ಲೂ ಬದಲಾವಣೆ ಮಾಡಲಾಗಿದೆ.

ಹಾವೇರಿ: ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿರುವುದರಿಂದ ಪೊಲೀಸ್ ಇಲಾಖೆಯ ಶ್ವಾನ ದಳದ ನಾಯಿಗಳಿಗೆ ಏರ್‌ ಕೂಲರ್ ವ್ಯವಸ್ಥೆ ಕಲ್ಪಿಸಿದೆ. ಅಧಿಕ ಉಷ್ಣಾಂಶದಿಂದ ಬಳಲುತ್ತಿದ್ದ ಪೊಲೀಸ್ ಶ್ವಾನಗಳು ಈಗ ಖುಷಿಯಿಂದ ಕಾಲ ಕಳೆಯುತ್ತಿವೆ.

ಬಿಸಿಲಿನ ತೀವ್ರತೆ, ಸೆಕೆಯಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲು. ತಾಪಮಾನದಿಂದ ಜನರೇ ಕಂಗೆಡುತ್ತಿದ್ದಾರೆ. ಅದೇ ರೀತಿ ಪೊಲೀಸ್ ಇಲಾಖೆಯ ಪ್ರಬಲ ಅಸ್ತ್ರ ಎಂದೇ ಪರಿಗಣಿತವಾಗಿರುವ ಶ್ವಾನ ದಳದ ನಾಯಿಗಳು ಬಿಸಿಲ ಹೊಡೆತಕ್ಕೆ ಕಂಗಾಲಾಗಿವೆ. ಇದನ್ನು ಮನಗಂಡು ಇಲಾಖೆಯಿಂದ ಶ್ವಾನಗಳಿರುವ ಕೊಠಡಿಗಳಿಗೆ ಏರ್‌ ಕೂಲರ್ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿಯ ಸಶಸ್ತ್ರ ಪೊಲೀಸ್ ಮೀಸಲು ಪಡೆ ಕಟ್ಟಡದ ನಾಲ್ಕು ಕೊಠಡಿಗಳಲ್ಲಿ ಸಾನ್ಸಾ, ಕೈರಾ, ಪಾರು, ಆರ್ಯ ಸೇರಿದಂತೆ ನಾಲ್ಕು ಪೊಲೀಸ್ ಶ್ವಾನಗಳಿವೆ. ಆ ನಾಲ್ಕೂ ಕೊಠಡಿಗಳಿಗೆ ಈಗ ಏರ್‌ ಕೂಲರ್‌ ಅಳವಡಿಸಲಾಗಿದೆ.

ಅಪರಾಧ ಪತ್ತೆ ಹಚ್ಚುವುದು, ಬಾಂಬ್‌ ಪತ್ತೆ ಮಾಡುವ ಪೊಲೀಸ್ ಶ್ವಾನಗಳು ಬೇಸಿಗೆಯ ತಾಪಕ್ಕೆ ಬಳಲದಂತೆ ಇಲಾಖೆ ನೋಡಿಕೊಳ್ಳುತ್ತಿದೆ.

ಬೇಸಿಗೆಯ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ‌. ಈ ಸುಡು ಬಿಸಿಲಿಗೆ ಜನರೇ ಹೊರಗೆ ಬರಲು ಹೆದರುತ್ತಿದ್ದಾರೆ. ಕರ್ತವ್ಯದಲ್ಲಿರುವ ಪೊಲೀಸ್ ಶ್ವಾನಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. 40 ಡಿಗ್ರಿ ಸಮೀಪಿಸುತ್ತಿರುವ ತಾಪಮಾನ ಪೊಲೀಸ್ ಶ್ವಾನಗಳ ಮೇಲೂ ಪರಿಣಾಮ ಬೀರುತ್ತಿದೆ. ದಿನಪೂರ್ತಿ ಟ್ರ್ಯಾಕಿಂಗ್, ಬಾಂಬ್ ಡಿಟೆಕ್ಷನ್, ಕ್ರೈಂ ಇನ್ವೆಸ್ಟಿಗೇಷನ್‌ನಲ್ಲಿ ತೊಡಗಿರುವ ಶ್ವಾನಗಳಿಗೆ ಹೀಟ್ ಸ್ಟ್ರೋಕ್ ಭೀತಿ ಎದುರಾಗಿದೆ. ಹೀಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.

ಶ್ವಾನಗಳಿಗೆ ತಂಪಾದ ನೀರು, ವಿಶೇಷ ಆಹಾರ ಹಾಗೂ ವಿಶ್ರಾಂತಿ ವ್ಯವಸ್ಥೆಯನ್ನೂ ಇಲಾಖೆ ಮಾಡಿದೆ. ಪಶುವೈದ್ಯರ ಸಲಹೆ ಮೇರೆಗೆ ಆರೋಗ್ಯ ತಪಾಸಣೆ ಕೂಡ ನಿಯಮಿತವಾಗಿ ನಡೆಸಲಾಗುತ್ತದೆ.

ಇದರೊಂದಿಗೆ ಬೇಸಿಗೆಯಲ್ಲಿ ಶ್ವಾನಗಳಿಗೆ ನೀಡುವ ಊಟದ ಪದ್ದತಿಯಲ್ಲೂ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಲಾಗಿದೆ. ಹೆಚ್ಚಾಗಿ ತಂಪಾದ ಮೊಸರು ನೀಡಲಾಗುತ್ತಿದೆ. ಕೂಲರ್‌ ಅಳವಡಿಕೆ ಬಳಿಕ ಶ್ವಾನದಳ ವಿಭಾಗಕ್ಕೆ ಖುದ್ದಾಗಿ ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಭೇಟಿ ನೀಡಿ, ಶ್ವಾನಗಳ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಿದರು.

ಜಿಲ್ಲಾ ಪೊಲೀಸ್‌ ಶ್ವಾನದಳದಲ್ಲಿರುವ ನಾಲ್ಕು ಶ್ವಾನಗಳಿಗೆ ಬೇಸಿಗೆಯ ಸೆಕೆ, ಉಷ್ಣಾಂಶದಿಂದ ರಕ್ಷಣೆ ನೀಡಲು ಪ್ರತ್ಯೇಕ ನಾಲ್ಕು ಏರ್‌ ಕೂಲರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸದಾ ಚುರುಕಾಗಿರುವಂತೆ ಮಾಡಿ ಅವುಗಳ ಆರೋಗ್ಯ ಕಾಪಾಡುವುದು ಮುಖ್ಯ. ಅಪರಾಧ ಪತ್ತೆಹಚ್ಚಲು ಶ್ವಾನಗಳು ಪೊಲೀಸ್ ಇಲಾಖೆ ಪ್ರಮುಖ ಅಸ್ತ್ರವಾಗಿವೆ ಎಂದು ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಇಲ್ಲದೇ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ರೈತರ ಆಗ್ರಹ
ನೀಟ್ ಪರೀಕ್ಷೆ ರದ್ದುಪಡಿಸಲು ಆಗ್ರಹ, ಎಸ್‌ಎಫ್‌ಐ ಪ್ರತಿಭಟನೆ