ಎಫ್‌ಐಡಿ ಮೂಲಕ ರಸಗೊಬ್ಬರ ವಿತರಣೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : May 14, 2026, 01:00 AM IST
ಹಾವೇರಿ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟಿಸಿ ತಹಸೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ರೈತರಿಗೆ ಎಫ್‌ಐಡಿ ಮೂಲಕ ರಸಗೊಬ್ಬರ ವಿತರಣೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದಿಂದ ಬುಧವಾರ ಹಾವೇರಿಯ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಲಾಯಿತು.

ಹಾವೇರಿ: ರಾಜ್ಯ ಸರ್ಕಾರ ರೈತರಿಗೆ ಎಫ್‌ಐಡಿ ಮೂಲಕ ರಸಗೊಬ್ಬರ ವಿತರಣೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದಿಂದ ಬುಧವಾರ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟಿಸಲಾಯಿತು.

ನಗರದ ತೇರು ಬೀದಿ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ರೈತರ ಪ್ರತಿಭಟನಾ ಮೆರವಣಿಗೆ ಪಿ.ಬಿ. ರೋಡ್, ಮೈಲಾರ ಮಹದೇವಪ್ಪ ಸರ್ಕಲ್ ಮೂಲಕ ಮಹಾತ್ಮಾ ಗಾಂಧಿ ವೃತ್ತಕ್ಕೆ ಬಂದು ಸಮಾವೇಶಗೊಂಡಿತು. ಈ ವೇಳೆ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಮುಂಗಾರು ಮಳೆ ಆರಂಭಗೊಳ್ಳುವ ಮುನ್ನವೇ ರಸಗೊಬ್ಬರ ನೀಡುವಲ್ಲಿ ವಿಫಲವಾಗಿದೆ. ಈ ಮಧ್ಯೆ ಎಫ್‌ಐಡಿ ಮೂಲಕ ರೈತರಿಗೆ ಗೊಬ್ಬರ ವಿತರಣೆಗೆ ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕೂಡಲೇ ಎಫ್‌ಐಡಿ ಮೂಲಕ ಗೊಬ್ಬರ ವಿತರಣೆ ಬಂದ್ ಮಾಡಿ, ಹಳೆಯ ಮಾದರಿಯಲ್ಲಿಯೇ ರೈತರಿಗೆ ರಸಗೊಬ್ಬರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಮೂರು ತಲೆಮಾರುಗಳಿಂದ ಅರಣ್ಯಭೂಮಿ, ಬಗರ್‌ಹುಕುಂ, ಇತರ ಸರ್ಕಾರಿ ಜಮೀನು ಸಾಗುವಳಿ ಮಾಡಿದ ಸಾವಿರಾರು ಕುಟುಂಬಗಳಿದ್ದು, ಅನೇಕ ರೈತರ ಹೆಸರಿಗೆ ಇನ್ನೂ ಜಮೀನು ಹಕ್ಕಪತ್ರ ವಿತರಿಸಿಲ್ಲ. ಅಲ್ಲದೇ ಸರ್ಕಾರ ಇವರಿಗೆ ಯಾವುದೇ ಸಾಲ ಸೌಲಭ್ಯ ನೀಡಿಲ್ಲ. ಈಗ ಸರ್ಕಾರ ಎಫ್‌ಐಡಿ ಮೂಲಕ ರಸಗೊಬ್ಬರ ನೀಡಲು ಮುಂದಾಗಿದೆ. ಹಕ್ಕುಪತ್ರ ನೀಡದ ರೈತರಿಗೆ ಈಗ ರಸಗೊಬ್ಬರ ಸಿಗದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಹಳೆಯ ಮಾದರಿಯಲ್ಲಿಯೇ ರಸಗೊಬ್ಬರ ವಿತರಣೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ 38 ಗ್ರಾಮ ಪಂಚಾಯಿತಿಗಳ ರೈತರಿಗೆ ಮಾತ್ರ ಬೆಳೆವಿಮೆ ಹಣ ಬಂದಿದೆ. ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ರೈತರು ಬೆಳೆ ವಿಮೆ ತುಂಬಿದ್ದರೂ ಪರಿಹಾರ ಬಂದಿಲ್ಲ. ಈ ಕೂಡಲೇ ಬೆಳೆವಿಮೆ ಹಣ ನೀಡಲು ಕ್ರಮಕೈಗೊಳ್ಳಬೇಕು. ಕಳೆದ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಗೆ ತೋಟಗಾರಿಕೆ ಬೆಳೆಗಳಾದ ಎಲೆಬಳ್ಳಿ, ಕಲ್ಲಂಗಡಿ, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಈ ಕೂಡಲೇ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.

2024-2025ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ದನದ ಕೊಟ್ಟಿಗೆ, ಕುರಿ, ಕೋಳಿಗಳ ಶೆಡ್ಡು ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ಸಾಲ-ಸೋಲ ಮಾಡಿ ಮಾಡಿಕೊಂಡಿದ್ದಾರೆ. ಆದರೆ ಈ ವರೆಗೂ ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ಬಂದಿಲ್ಲ. ಈ ಕೂಡಲೇ ಅನುದಾನ ಬಿಡುಗಡೆ ಮಾಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ರೈತರ ಕೃಷಿ ಸಾಲಕ್ಕೆ ಸಿಬಿಲ್ ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಿ ತಹಸೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ಪಾಟೀಲ, ಚಂದ್ರಶೇಖರ ಮಾನೇರ, ಗಂಗಮ್ಮ ಅಣ್ಣಿಗೇರಿ, ಪಾರ್ವತಿ ಈಳಿಗೇರ, ಶಿವಪ್ಪ ಹಲಗೇರಿ, ಚೆನ್ನಮ್ಮ ಸಾತೇನಹಳ್ಳಿ, ಅಶೋಕ ಶಿಡಗನಾಳ, ಕನಗೌಡ ಕನಗೌಡ್ರ, ಗೀತಾ ಹಿರೇಕೆರೂರು, ಪುಟ್ಟಪ್ಪ ಬೆಂಚಿಹಳ್ಳಿ, ಲೋಕಪ್ಪ ಮುಚಡಿ, ರಾಮಪ್ಪ ಹೊಸಳ್ಳಿ, ಹಾಲಪ್ಪ ಜಾಡರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಇಲ್ಲದೇ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ರೈತರ ಆಗ್ರಹ
ನೀಟ್ ಪರೀಕ್ಷೆ ರದ್ದುಪಡಿಸಲು ಆಗ್ರಹ, ಎಸ್‌ಎಫ್‌ಐ ಪ್ರತಿಭಟನೆ