ಬ್ಯಾಡಗಿ: ನಾಲ್ಕು ದಿನಗಳಿಂದ ಒಂದಲ್ಲೊಂದು ಅಡೆತಡೆ, ಪ್ರತಿಭಟನೆ ಹಾಗೂ ಮನವೊಲಿಕೆ ನಡುವೆಯೇ ಸಾಗುತ್ತಿದ್ದ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯ ಕಟ್ಟಡ ತೆರವು ಕಾರ್ಯಾಚರಣೆ ಬುಧವಾರ 5ನೇ ದಿನ ಯಾವುದೇ ಅಡಚಣೆಗಳಿಲ್ಲದೆ ಸುಗಮವಾಗಿ ನಡೆಯಿತು. ಇದರಿಂದ ಜಿಲ್ಲಾಡಳಿತ ಹಾಗೂ ಸಾರ್ವಜನಿಕರಲ್ಲಿ ಹೊಸ ಉತ್ಸಾಹ ಮೂಡಿದಂತಾಯಿತು.
ಮುರಿಗೆಪ್ಪ ಶೆಟ್ಟರ್ ಸ್ವಯಂ ತೆರವು: ಸೋಮವಾರ ಒಪ್ಪಿ ಮಂಗಳವಾರ ಕ್ಯಾತೆ ತೆಗೆದು ಆನಂತರ ಹೈಡ್ರಾಮಾ ನಡೆಸಿ, ಬಳಿಕ ನಡೆದ ಮಾತುಕತೆ ಹಾಗೂ ಅಧಿಕಾರಿಗಳ ಮನವೊಲಿಕೆಯಿಂದ ಮುರಿಗೆಪ್ಪ ಶೆಟ್ಟರ ಸ್ವತಃ ತಮ್ಮ ಆಸ್ತಿಯನ್ನು ತಾವೇ ತೆರವುಗೊಳಿ ಸಲು ಮುಂದಾದರು. ಇದರಿಂದ ಜಿಲ್ಲಾಡಳಿತಕ್ಕೂ ತಲೆನೋವು ಕಡಿಮೆಯಾಯಿತು. ಬುಧವಾರದ ಕಾರ್ಯಾಚರಣೆ ಯಾವುದೇ ಅಡೆತಡೆ ಇಲ್ಲದೆ ವೇಗವಾಗಿ ಸಾಗಿತು.
ಬೃಹತ್ ಕಟ್ಟಡಗಳೇ ದೊಡ್ಡ ಸವಾಲು: 5ನೇ ದಿನದ ಕಾರ್ಯಾಚರಣೆಯಲ್ಲಿ ದೊಡ್ಡ ಗಾತ್ರದ ವಾಣಿಜ್ಯ ಕಟ್ಟಡಗಳ ತೆರವು ಅಧಿಕಾರಿಗಳಿಗೆ ಸಾಕಷ್ಟು ಸವಾಲು ತಂದೊಡ್ಡಿತು. ಕೆಲವು ಕಟ್ಟಡಗಳಲ್ಲಿ ಅತಿದೊಡ್ಡ ಕಬ್ಬಿಣದ ಕಂಬಗಳು, ದಪ್ಪ ಕಾಂಕ್ರೀಟ್ ಕಂಬಗಳು ಹಾಗೂ ಜೆಸಿಬಿಗೂ ಸರಿಯಾಗಿ ಸಿಗದಷ್ಟು ದೊಡ್ಡದಾಗಿ ನಿರ್ಮಾಣ ಭಾಗಗಳಿದ್ದ ಕಾರಣ ತೆರವು ಕಾರ್ಯವನ್ನು ಅತ್ಯಂತ ಜಾಗೃತಿಯಿಂದ ನಡೆಸಬೇಕಾಯಿತು.ಡಿಸಿ ಮೊಕ್ಕಾಂ: ಬುಧವಾರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡಿದರು. ಪೊಲೀಸ್ ಬಿಗಿ ಭದ್ರತೆಯ ನಡುವೆ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಮೂಲಕ ಬೃಹತ್ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
ಚಾಲಕರ ನೈಪುಣ್ಯಕ್ಕೆ ಮೆಚ್ಚುಗೆ: ಜೆಸಿಬಿ ಹಾಗೂ ಹಿಟಾಚಿ ವಾಹನ ಚಾಲಕರು ತೋರಿದ ನೈಪುಣ್ಯ ಕಾರ್ಯಾಚರಣೆಯ ವಿಶೇಷ ಆಕರ್ಷಣೆಯಾಯಿತು. ಅತಿ ಕಡಿಮೆ ಜಾಗದಲ್ಲಿ ಬೃಹತ್ ಯಂತ್ರಗಳನ್ನು ಚಲಾಯಿಸಿ ಕಟ್ಟಡಗಳನ್ನು ಕ್ರಮಬದ್ಧವಾಗಿ ನೆಲಸಮಗೊಳಿಸಿದ ರೀತಿ ಸಾರ್ವಜನಿಕರ ಗಮನ ಸೆಳೆಯಿತು. ಯಾವುದೇ ಅನಾಹುತ ಸಂಭವಿಸದಂತೆ ಕಟ್ಟಡಗಳನ್ನು ಹಂತ ಹಂತವಾಗಿ ತೆರವುಗೊಳಿಸಿದ ವಿಧಾನಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈಗಾಗಲೇ ಶೇ. 80ರಷ್ಟು ತೆರವು ಕಾರ್ಯ ಮಾಡಲಾಗಿದೆ. ಕೆಲವರು ಕಟ್ಟಡಗಳನ್ನು ಸ್ವಯಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದು ಬೇಗ ತೆರವುಮಾಡಿಕೊಳ್ಳಬೇಕು. ಮಳೆಗಾಲ ಆರಂಭವಾದರೆ ಕಾರ್ಯಾಚರಣೆ ಕಷ್ಟವಾಗುತ್ತದೆ. ನಿಮ್ಮ ಸಹಕಾರ ಇದ್ದರೆ ಆದಷ್ಟು ಬೇಗ ಉತ್ತಮ ಮುಖ್ಯರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.