ಸಂಡೂರು: ಪಹಣಿಯಲ್ಲಿ ಅಕ್ರಮವಾಗಿ ಸೇರಿಕೊಂಡ ಹೆಸರು ರದ್ದುಗೊಳಿಸಲು ಒತ್ತಾಯಿಸಿ ಲಿಂಗದಹಳ್ಳಿ ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮುಖಂಡ ವಿ.ಎಸ್. ಶಂಕರ್, ಜಮೀನಿನ ಮೂಲ ಪಟ್ಟಾದಾರರಾದ ಸತ್ಯಪ್ಪನ ಮಕ್ಕಳು, ಮೊಮ್ಮಕ್ಕಳು ಮೂರು ತಲೆಮಾರುಗಳಿಂದ ಜಮೀನು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಈಗಲೂ ಸತ್ಯಪ್ಪನವರ ಕುಟುಂಬಸ್ಥರೇ ಈ ಜಮೀನನ್ನು ಉಳುಮೆ ಮಾಡುತ್ತಿದ್ದಾರೆ. ಆದರೆ ಈ ಜಮೀನಿನ ಪಹಣಿಯಲ್ಲಿ ಅಕ್ರಮವಾಗಿ ಸೇರಿಕೊಂಡ ಬೋಯಾ ಸಕ್ರಪ್ಪನವರ ಕುಟುಂಬಸ್ಥರು ೨೦೨೩ರಲ್ಲಿ ಕುಡುತಿನಿಯ ರಾಮರಾವ್ ಎಂಬುವವರಿಗೆ ಅಕ್ರಮವಾಗಿ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು ದೂರಿದರು.
ಜು.೧೩ರಂದು ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ:ಜಮೀನಿನ ಪಟ್ಟಾದಾರರು ಹಾಗೂ ಪ್ರಸ್ತುತ ಉಳುಮೆ ಮಾಡುತ್ತಿರುವ ಸತ್ಯಪ್ಪನವರ ಕುಟುಂಬಸ್ಥರಿಗೆ ಅಕ್ರಮವಾಗಿ ಜಮೀನು ಖರೀದಿಸಿರುವವರು ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತಂತೆ ರಾಜಶೇಖರ್ ಎಂಬವರ ವಿರುದ್ಧ ದೂರು ದಾಖಲಾಗಿದೆ. ಪಹಣಿಯಲ್ಲಿ ಅಕ್ರಮವಾಗಿ ಸೇರಿಕೊಂಡಿರುವ ಹೆಸರನ್ನು ರದ್ದುಪಡಿಸಿ, ಮೂಲ ಪಟ್ಟಾದಾರರ ಹೆಸರನ್ನು ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಮೂಲ ಪಟ್ಟಾದಾರರು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜು.೧೩ ರಂದು ಲಿಂಗದಹಳ್ಳಿ ಗ್ರಾಮದಿಂದ ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯತ್ರೆ ಹಮ್ಮಿಕೊಂಡಿದ್ದೇವೆ ಎಂದರು.