ಸಂಡೂರು ಬೈಪಾಸ್ ರಸ್ತೆಯ ಟೋಲ್ ಗುತ್ತಿಗೆ ಕರಾರು ರದ್ದುಗೊಳಿಸಲು ಒತ್ತಾಯ

KannadaprabhaNewsNetwork |  
Published : Aug 20, 2025, 02:00 AM IST
ಚಿತ್ರ: ೧೮ಎಸ್.ಎನ್.ಡಿ.೦೨- ಸಂಡೂರಿನಲ್ಲಿ ರೈತ ಸಂಘದ ಮುಖಂಡರು ಲೋಕೋಪಯೋಗಿ ಇಲಾಖೆಯ ಎಇಇ ಕೊಟ್ರೇಶ್ ಅವರಿಗೆ ಮನವಿ ಸಲ್ಲಿಸಿದರು. ೧೮ಎಸ್.ಎನ್.ಡಿ.೦೩- ಸಂಡೂರು ಬೈಪಾಸ್ ರಸ್ತೆಯಲ್ಲಿ ಸಾಲಾಗಿ ನಿಂತಿರುವ ಅದಿರು ಸಾಗಣೆ ವಾಹನಗಳು. | Kannada Prabha

ಸಾರಾಂಶ

ರಾಜ್ಯ ರೈತ ಸಂಘದ ಮುಖಂಡರು ಲೋಕೋಪಯೋಗಿ ಇಲಾಖೆ ಎಇಇ ಕೊಟ್ರೇಶ್ ಮೂಲಕ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸಂಡೂರು

ಸಂಡೂರು ಬೈಪಾಸ್ ರಸ್ತೆಯನ್ನು ನಿರ್ವಹಿಸುತ್ತಿರುವ ಸಂಡೂರು ಬೈಪಾಸ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಲೋಕೋಪಯೋಗಿ ಇಲಾಖೆಯೊಂದಿಗೆ ಮಾಡಿಕೊಂಡಿರುವ ನೇರ ಸುಂಕ ರಿಯಾಯಿತಿ ಒಪ್ಪಂದ (ಡಿಟಿಸಿಎ) ಕರಾರಿನಲ್ಲಿರುವ ಷರತ್ತುಗಳನ್ನು ಉಲ್ಲಂಘನೆ ಮಾಡಿರುವುದರಿಂದ ಕರಾರರನ್ನು ರದ್ದುಗೊಳಿಸಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ವಶಕ್ಕೆ ಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಮುಖಂಡರು ಲೋಕೋಪಯೋಗಿ ಇಲಾಖೆ ಎಇಇ ಕೊಟ್ರೇಶ್ ಮೂಲಕ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಕಾರ್ಯದರ್ಶಿ ಎಂ.ಎಲ್.ಕೆ. ನಾಯ್ಡು ಮಾತನಾಡಿ, ಸಂಡೂರು ಪಟ್ಟಣದ ಹೊರ ವಲಯದ ಮೂಲಕ ಭುಜಂಗನಗರ ಮಾರ್ಗವಾಗಿ ಬಾಬಯ್ಯ ಕ್ರಾಸ್ ಮೂಲಕ ಹೊಸಪೇಟೆ ರಸ್ತೆಗೆ ಸಂಪರ್ಕ ಮಾಡುವ ೧೬.೧೭ ಕಿಮೀ ಅಂತರದಲ್ಲಿ ಈ ಕಂಪನಿಯು ೨೦ ವರ್ಷಗಳಿಂದ ಟೋಲ್ ಸಂಗ್ರಹ ಕಾರ್ಯಾಚರಣೆ ನಡೆಸುತ್ತಿದೆ. ಈ ಕಂಪನಿಯು ಲೋಕೋಪಯೋಗಿ ಇಲಾಖೆಯೊಂದಿಗೆ ಮಾಡಿಕೊಂಡಿರುವ ಕರಾರಿನಲ್ಲಿ ಉಲ್ಲೇಖಿಸಲಾಗಿರುವ ಷರತ್ತು ಉಲ್ಲಂಘಿಸಿದೆ. ಬೈಪಾಸ್ ಮಾರ್ಗದ ರಸ್ತೆಯ ಮೇಲೆ ಬಿದ್ದಿರುವ ಅದಿರು ಮಣ್ಣಿನ ಧೂಳನ್ನು ಸ್ವಚ್ಛಗೊಳಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಹೆದ್ದಾರಿಯಿಂದ ಏಳುವ ಧೂಳು ಪಕ್ಕದ ರೈತರ ಜಮೀನಿನಲ್ಲಿಯ ಬೆಳೆಗಳ ಮೇಲೆ ಆವರಿಸಿ, ಇಳುವರಿ ಕುಂಟಿತವಾಗುತ್ತಿದೆ. ಕಂಪನಿ ರೈತರ ಬೆಳೆ ನಷ್ಟಕ್ಕೆ ತಕ್ಕ ಪರಿಹಾರ ನೀಡಿಲ್ಲ ಎಂದು ದೂರಿದರು.

ಸೈನ್ ಬೋರ್ಡ್ ಅಳವಡಿಸಿರುವುದಿಲ್ಲ. ರಸ್ತೆ ಸುರಕ್ಷತೆ ಮಾನದಂಡಗಳನುಸಾರ ಇರುವುದಿಲ್ಲ. ಫಾಸ್ಟ್ ಟ್ಯಾಗ್ ಹಣವನ್ನು ಐಡಿಎಸಿಕೆ ಸಂಸ್ಥೆಯ ಬ್ಯಾಂಕ್ ಖಾತೆಗಾಗಲಿ ಅಥವ ಲೋಕೋಪಯೋಗಿ ಇಲಾಖೆಯ ಬ್ಯಾಂಕ್ ಖಾತೆಗಾಗಲಿ ಲಿಂಕ್ ಮಾಡದೆ, ನೇರವಾಗಿ ತನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಂಡು, ದಿನಕ್ಕೆ ಲಕ್ಷಾಂತರ ರೂ. ಲಾಭ ಮಾಡಿಕೊಂಡು ಸರ್ಕಾರಕ್ಕೆ ನೂರಾರು ಕೋಟಿ ವಂಚನೆ ಮಾಡಿದೆ ಎಂದರು.

ಹೆದ್ದಾರಿಯ ಅಭಿವೃದ್ಧಿ ಮತ್ತು ನಿರ್ವಹಣೆಯ ಹೊಣೆ ಹೊತ್ತಿರುವ ಎನ್‌ಯು-ಟೆಕ್ನೋ ಡಿಸೈನ್ ಕನ್ಸಲ್ಟಂಟ್ಸ್ ಏಜೆನ್ಸಿಯು ರಸ್ತೆಯನ್ನು ಮಾಲಿನ್ಯ ರಹಿತವಾಗಿ, ಅಪಘಾತ ರಹಿತವಾಗಿರುವಂತೆ ನೋಡಿಕೊಳ್ಳಲು ವಿಫಲವಾಗಿದೆ. ಕ್ರಾಸ್ ಆಗುವ ರಸ್ತೆಗಳಲ್ಲಿ ರಿಫ್ಲೆಕ್ಟರ್‌ ಅಳವಡಿಸಿಲ್ಲ. ಬೀದಿ ದೀಪಗಳು ಇಲ್ಲದಿರುವುದು, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಿಶ್ರಾಂತಿ ಸ್ಥಳ ಇಲ್ಲದೇ ಇರುವುದು, ೩-೪ ಕಿಮೀ ಗಟ್ಟಲೆ ಅದಿರು ಸಾಗಣೆ ಲಾರಿಗಳು ರಸ್ತೆ ಪಕ್ಕದಲ್ಲಿಯೇ ನಿಲುಗಡೆ ಮಾಡುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ದೂರಿದರು.

ಕರಾರು ಪತ್ರದಲ್ಲಿನ ನಿಬಂಧನೆಗಳ ಉಲ್ಲಂಘನೆಯಾಗಿರುವ ಹಿನ್ನೆಲೆ ಸಂಡೂರು ಬೈಪಾಸ್ ಪ್ರಾಜೆಕ್ಟ್ ಲಿಮಿಟೆಡ್ ಕಂಪನಿಯ ಗುತ್ತಿಗೆಯನ್ನು ರದ್ದುಪಡಿಸಲು ಮತ್ತು ಇಲಾಖೆಗೆ ಪಡೆಯಲು ಶಿಫಾರಸ್ ಮಾಡಬೇಕು. ೭ ದಿನಗಳ ಒಳಗೆ ಶಿಫಾರಸ್ಸು ವರದಿ ನೀಡದಿದ್ದಲ್ಲಿ, ತಾಲ್ಲೂಕಿನ ವಿವಿಧ ಸಂಘಟನೆಗಳು ಬೈಪಾಸ್ ಹೆದ್ದಾರಿಯಲ್ಲಿನ ನಾಲ್ಕು ಸುಂಕ ವಸೂಲಾತಿ ಕೇಂದ್ರಗಳಿಗೆ ಬೀಗ ಹಾಕುವ ಮೂಲಕ ಎಲ್ಲಾ ವಾಹನಗಳಿಗೆ ಸುಂಕ ರಹಿತವಾಗಿ ಸಂಚರಿಸಲು ಅನುವು ಮಾಡಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಟಿ.ಎಂ. ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ಮೂಲಿಮನೆ ಈರಣ್ಣ, ಕೆ.ಆರ್.ಎಸ್ ಪಕ್ಷದ ಖಾದರ್ ಬಾಷ, ಮಂಜುನಾಥ ಗೌಳಿ, ರವಿಕುಮಾರ್, ಶರ್ಮಾಸ್ ವಲಿ, ಸಲೀಂ ಉಪ್ಥಿತರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ