ಗೋಮಾಳ ಜಮೀನು ಒತ್ತುವರಿ ತೆರವಿಗೆ ಒತ್ತಾಯ

KannadaprabhaNewsNetwork |  
Published : Jun 11, 2025, 11:30 AM IST
ಕಲಘಟಗಿ ಗ್ರೇಡ್-2 ತಹಸೀಲ್ದಾರ್ ಬಸವರಾಜ ಹೊಂಕಣ್ಣವರ ಅವರಿಗೆ ಸುತಗಟ್ಟಿ ಗ್ರಾಮಸ್ಥರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸುತಗಟ್ಟಿ ಗ್ರಾಮದ ಸರ್ವೇ ನಂ. 231 ಕ್ಷೇತ್ರ 39 ಎಕರೆ 20 ಗುಂಟೆ ಜಮೀನು ಸರ್ಕಾರಿ ಜಾಗಕ್ಕೆ ಸೇರಿದೆ. ಈ ಜಮೀನಿನಲ್ಲಿ ಅನಾದಿ ಕಾಲದಿಂದಲೂ ಗ್ರಾಮಸ್ಥರು ದನಕರುಗಳನ್ನು ಮೇಯಿಸುತ್ತಾ ಬಂದಿದ್ದಾರೆ. ಆಸ್ತಿಯನ್ನು ಹೊರತುಪಡಿಸಿ ಗ್ರಾಮಸ್ಥರಿಗೆ ಬೇರೆ ಯಾವುದೇ ಸರ್ಕಾರಿ ಜಾಗೆ ಇರುವುದಿಲ್ಲ. ಗ್ರಾಮಕ್ಕೆ ಸ್ಮಶಾನ ಭೂಮಿಗೆ ಮತ್ತು ಸರ್ಕಾರಿ ಶಾಲೆಗೆ ಹಾಗೂ ಆಸ್ಪತ್ರೆ ಕಟ್ಟಿಸಲು ಈ ಜಾಗ ಸೂಕ್ತವಾಗಿದೆ. ಆದರೆ, ಕೆಲವು ಜನರು ಅಕ್ರಮವಾಗಿ ಜಾಗ ಕಬ್ಜಾ ಮಾಡಿಕೊಂಡು ಉಳುಮೆ ಮಾಡಿಕೊಂಡಿದ್ದಾರೆ.

ಕಲಘಟಗಿ: ತಾಲೂಕಿನ ಗಂಜಿಗಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತಗಟ್ಟಿ ಗ್ರಾಮದ ಗೋಮಾಳ ಜಮೀನನ್ನು ಕೆಲವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ವಿರೋಧಿಸಿ ಸುತಗಟ್ಟಿ ಗ್ರಾಮದ ನೂರಾರು ರೈತರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸುತಗಟ್ಟಿ ಗ್ರಾಮದ ಸರ್ವೇ ನಂ. 231 ಕ್ಷೇತ್ರ 39 ಎಕರೆ 20 ಗುಂಟೆ ಜಮೀನು ಸರ್ಕಾರಿ ಜಾಗಕ್ಕೆ ಸೇರಿದೆ. ಈ ಜಮೀನಿನಲ್ಲಿ ಅನಾದಿ ಕಾಲದಿಂದಲೂ ಗ್ರಾಮಸ್ಥರು ದನಕರುಗಳನ್ನು ಮೇಯಿಸುತ್ತಾ ಬಂದಿದ್ದಾರೆ. ಆಸ್ತಿಯನ್ನು ಹೊರತುಪಡಿಸಿ ಗ್ರಾಮಸ್ಥರಿಗೆ ಬೇರೆ ಯಾವುದೇ ಸರ್ಕಾರಿ ಜಾಗೆ ಇರುವುದಿಲ್ಲ. ಗ್ರಾಮಕ್ಕೆ ಸ್ಮಶಾನ ಭೂಮಿಗೆ ಮತ್ತು ಸರ್ಕಾರಿ ಶಾಲೆಗೆ ಹಾಗೂ ಆಸ್ಪತ್ರೆ ಕಟ್ಟಿಸಲು ಈ ಜಾಗ ಸೂಕ್ತವಾಗಿದೆ. ಆದರೆ, ಕೆಲವು ಜನರು ಅಕ್ರಮವಾಗಿ ಜಾಗ ಕಬ್ಜಾ ಮಾಡಿಕೊಂಡು ಉಳುಮೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಕ್ರಮವಾಗಿ ಜಮೀನು ಕಬ್ಜಾ ಮಾಡಿಕೊಂಡಿರುವ ಜನರು ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ. ಶವಗಳನ್ನು ಹೂಳಲು ಸಹ ಬಿಡುತ್ತಿಲ್ಲ. ‘ಇದು ನಾವು ಉಳುಮೆ ಮಾಡಿಕೊಂಡ ಜಾಗ, ಇಲ್ಲಿ ಯಾರೂ ಸಹ ಕಾಲಿಡಲು ಬಿಡುವುದಿಲ್ಲ’ಎಂದು ಗ್ರಾಮಸ್ಥರನ್ನು ಗಧರಿಸುತ್ತಿದ್ದಾರೆ. ಈ ಜಾಗ ಬಿಟ್ಟು ಕೊಟ್ಟರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರೂ ಅವರು ಒಪ್ಪದೇ ಹೆದರಿಸುತ್ತಿದ್ದಾರೆ ಎಂದು ದೂರಿದರು.

ಸರ್ಕಾರಿ ಸ್ಥಳದಲ್ಲಿ ಸರ್ಕಾರಿ, ಅರೆ ಸರ್ಕಾರಿ ಯೋಜನೆಗಳ ಕೆಲಸಕ್ಕಾಗಿ ಬಳಸಿಕೊಳ್ಳಲು ಹಾಗೂ ಸ್ಮಶಾನ, ಆಸ್ಪತ್ರೆ, ಶಾಲೆ ಇವುಗಳನ್ನು ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಅನಧಿಕೃತ ಕಬ್ಜಾದಾರರನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಕಬ್ಜಾದಾರರು ಎಲ್ಲರೂ ಸೇರಿ ಗ್ರಾಮಸ್ಥರೊಂದಿಗೆ ತಂಟೆ ತಕರಾರ ಮಾಡುವ ಸಂಭವವಿದ್ದು, ಅದನ್ನು ತಡೆಗಟ್ಟಲು ಪೊಲೀಸ್ ಸಿಬ್ಬಂದಿ ನೇಮಕ ಮಾಡಿ ಗ್ರಾಮದಲ್ಲಿ ಶಾಂತತೆ ಕಾಪಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಈ ವೇಳೆ ಗ್ರಾಮಸ್ಥರಾದ ಬಸನಗೌಡ ಪಾಟೀಲ, ಚನ್ನಪ್ಪಗೌಡ ಪಾಟೀಲ, ಬಿ.ಟಿ. ಪಾಟೀಲ, ಕಲ್ಲಪ್ಪ ಬೆಣಕನ್ನವರ, ಯಲ್ಲಪ್ಪ ದೊಡ್ಡಮನಿ, ಸಿದ್ದಪ್ಪ ಪಾಳೇದ, ಕಲ್ಲಪ್ಪ ಹುಬ್ಬಳ್ಳಿ, ಫಕ್ಕಿರಪ್ಪ ಕಂದಗಲ್ಲ, ಸಿದ್ದಪ್ಪ ಬೆನ್ನಳ್ಳಿ, ಶಂಕರಗೌಡ ಪಾಟೀಲ, ಬಸಪ್ಪ ವಾಲಿಕಾರ, ಈರಪ್ಪ ಗೊಜನೂರು, ಶಿವಪ್ಪ ಪಾಳೇದ, ಎಸ್.ಟಿ. ಪಾಟೀಲ, ಚನ್ನಪ್ಪ ಹುಲಮನಿ, ನೀಲಪ್ಪ ಕುರಬರ, ಶೇಖಪ್ಪ ಕರಮಡಿ, ಧರ್ಮಗೌಡ ಪಾಟೀಲ, ಮುದಕಪ್ಪ ಮಾಯನ್ನವರ, ಯಲ್ಲಪ್ಪ ಮಾಯನ್ನವರ, ಪರಸಪ್ಪ ಗುಂಜಳ ಹಾಗೂ ಗ್ರಾಮಸ್ಥರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ