ಈಶ್ವರ ಶೆಟ್ಟರ್
ತೋಟಗಾರಿಕೆ ವಿವಿಯಲ್ಲಿ ಮಂಗಳವಾರ ನಡೆದ 14ನೇ ಘಟಿಕೋತ್ಸವದಲ್ಲಿ ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಬಿ.ಎಸ್.ಸಿ ಪದವಿ ವಿದ್ಯಾರ್ಥಿಗಳಾದ ಸಹನಾ ಪಾಟಗೆ 17 ಹಾಗೂ ಭೀಮವ್ವ 16 ಚಿನ್ನದ ಪದಕಗಳು ಪಡೆದುಕೊಂಡಿದ್ದು, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಮಂಗಳವಾರ ಪದಕಗಳನ್ನು ಪ್ರದಾನ ಮಾಡಿದರು.
17 ಚಿನ್ನದ ಪದಕ ಪಡೆದ ಸಹನಾ ಪಾಟಗೆ ಅವರು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಟೈಲರ್ ವೃತ್ತಿಯಲ್ಲಿರುವ ಮಂಜುನಾಥ ಮತ್ತು ಶೋಭಾಳ ದಂಪತಿ ಪುತ್ರಿ. ಹೊಳಲು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿವರೆಗೆ, ಹೂವಿನ ಹಡಗಲಿಯ ಮ.ಮ.ಪಾಟೀಲ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ್ದು, ಬೀದರ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತೋಟಗಾರಿಕೆ ಸ್ನಾತಕ ಪದವಿ ಅಧ್ಯಯನ ಮಾಡುತ್ತಿದ್ದಾರೆ.ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ:ಕಾಲೇಜು ಹಂತದಲ್ಲಿ ಟಾಪರ್ ಆಗಿದ್ದೆ. ಆದರೆ ಪದವಿಯಲ್ಲಿ ಸಾಧನೆ ಮಾಡುತ್ತೇನೆ ಅಂದುಕೊಂಡಿರಲಿಲ್ಲ. ಇಷ್ಟೊಂದು ಪದಕಗಳು ಸಿಕ್ಕಿರುವುದು ಸಂತೋಷವಾಗಿದೆ. ಹೆಣ್ಣು ಮಕ್ಕಳಿಗೂ ಓದಲು ಅವಕಾಶ ಕೊಟ್ಟರೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಾರೆ. ಸಾಧನೆಗೆ ಕಾಲೇಜಿನ ಉಪನ್ಯಾಸಕರು ಸೇರಿದಂತೆ ಗೆಳೆಯರು ಸಹ ಸಹಾಯ ಮಾಡಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ತೋಟಗಾರಿಕೆ ಕ್ಷೇತ್ರದಲ್ಲಿಯೇ ಅಧ್ಯಯನ ಮುಂದುವರಿಸುವುದಾಗಿ ಸಹನಾ ಹೇಳುತ್ತಾರೆ. ಮಕ್ಕಳ ಸಾಧನೆ ಮಾಡಿದರೆ ಆಗುವ ಸಂತೋಷ ಬೇರೆನೂ ಇಲ್ಲವೆಂದು ಸಹನಾ ತಂದೆ ಮಂಜುನಾಥ ಹೇಳಿದರು.
ಭೀಮವ್ವ ಬಿ.ಎಸ್ಸಿ (ಹಾನರ್ಸ್ ) ತೋಟಗಾರಿಕೆ ಪದವಿಯಲ್ಲಿ 5 ಚಿನ್ನದ ಪದಕ ಪಡೆದರೆ, ಪಲ್ಲವಿ ಎಲ್. ಮಲ್ಲಣ್ಣವರ 4, ನಿತ್ಯಶ್ರೀ ಎಂ 4, ನಂದಿತಾ ನಾಯ್ಕ ಮತ್ತು ನಿತ್ಯಶ್ರೀ ಎಂ ತಲಾ 3, ಪ್ರಕೃತಿ ಬಿ.ಎಸ್ ಮತ್ತು ಪ್ರಿಯಾಂಕಾ ಟಿ.ಕ, ಪ್ರತೀಕ್ಷಾ ಹೆಗಡೆ, ವಿಜಯ ಬಾಲಾಜಿ ಯಾದವ, ರೇಖಾ ರಾಮಪ್ಪ ತೇಲಿ ತಲಾ 2, ಕೆ.ಚೈತ್ರಾ, ಜಯವರ್ಧನ ಆರ್, ಕೆ.ಸಮ್ಲಾ, ಲಕ್ಷ್ಮೀ ಗುಜಲೂರ, ಕಾಶಮ್ಮ ಪವಾಡಿ, ಮಹೇಶ ಹಾಗೂ ಆಶಾ ಕೆ.ಎಂ ತಲಾ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಡಾಕ್ಟರೇಟ್ ಪದವಿಯಲ್ಲಿ ಪವನ ಪಿ.ಆರ್ 4 ಚಿನ್ನದ ಪದಕ ಪಡೆದುಕೊಂಡರೆ, ವಂದನಾ ಮತ್ತು ಮಹಾಲಕ್ಷ್ಮೀ ಎಂ. ತಲಾ 2 ಪದಕ ಪಡೆದುಕೊಂಡಿದ್ದಾರೆ. ಎಂ.ಎಸ್.ಸಿ ಸ್ನಾತಕೋತ್ತರ ಪದವಿಯಲ್ಲಿ ಧನ್ಯಶ್ರೀ ಎಸ್.ಜಿ, ಅಮೂಲ್ಯ ಎಚ್.ಟಿ ತಲಾ 4 ಚಿನ್ನದ ಪದಕ ಪಡೆದರೆ, ಸಚಿನ ಮೋದಗಿ 3, ಗೀತಾಂಜಲಿ, ಸುಪ್ರಿಯಾ ಎಂ.ಎಸ್ ತಲಾ 2, ಲಿಖಿತಗೌಡ, ಕಾವ್ಯ, ಚಂದನ ಬಿ, ಹರ್ಷ ಪಾಟೀಲ, ಕಾರ್ತಿಕ ಸಿ.ಎಸ್, ಕುಣೆ ಲಾವಣ್ಯ, ಹರ್ಷಿತ ಬಿ.ಎಚ್ ತಲಾ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.