ಲೋಪದೋಷ ಆಗದಂತೆ ರೈತರಿಗೆ ಕೃಷಿ ಪರಿಕರ ವಿತರಿಸಿ: ಮಂಜುನಾಥ

KannadaprabhaNewsNetwork |  
Published : Jun 11, 2025, 11:28 AM IST
 ಸಿರುಗುಪ್ಪ ನಗರದ ಸಿಡಿಪಿಒ ಸಭಾಂಗಣದಲ್ಲಿ ಸೋಮವಾರ ನಡೆದ  ಕೃಷಿ ಪರಿಕರ ವಿತರಕರ ಹಾಗೂ ಮಾರಾಟಗಾರರ ಸಭೆಯಲ್ಲಿ ಜಿಲ್ಲಾ ಉಪ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿದರು. | Kannada Prabha

ಸಾರಾಂಶ

ವಿವಿಧ ಕೃಷಿ ಪರಿಕರಗಳನ್ನು ಆಯಾ ಕಾಯ್ದೆಗಳ ಅನುಸಾರ ಯಾವುದೇ ಕೊರತೆ, ಲೋಪದೋಷಗಳಾಗದಂತೆ ರೈತರಿಗೆ ವಿತರಿಸಬೇಕು.

ಕೃಷಿ ಪರಿಕರ ವಿತರಕರ, ಮಾರಾಟಗಾರರ ಸಭೆಯಲ್ಲಿ ಜಿಲ್ಲಾ ಉಪ ಕೃಷಿ ನಿರ್ದೇಶಕ ಸೂಚನೆಕನ್ನಡಪ್ರಭ ವಾರ್ತೆ ಸಿರುಗುಪ್ಪ

ವಿವಿಧ ಕೃಷಿ ಪರಿಕರಗಳನ್ನು ಆಯಾ ಕಾಯ್ದೆಗಳ ಅನುಸಾರ ಯಾವುದೇ ಕೊರತೆ, ಲೋಪದೋಷಗಳಾಗದಂತೆ ರೈತರಿಗೆ ವಿತರಿಸಬೇಕು ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ಮಂಜುನಾಥ ಹೇಳಿದರು.

ನಗರದ ಸಿಡಿಪಿಒ ಸಭಾಂಗಣದಲ್ಲಿ ಕೃಷಿ ಇಲಾಖೆ, ಗುಣ ನಿಯಂತ್ರಣ ಕಾರ್ಯಕ್ರಮದಡಿ ನಡೆದ ಕೃಷಿ ಪರಿಕರ ವಿತರಕರ ಹಾಗೂ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ, ಕೀಟನಾಶಕಗಳು ಮತ್ತು ಬಿತ್ತನೆ ಬೀಜ ವಿತರಿಸುವ ಸಂದರ್ಭದಲ್ಲಿ ಅವುಗಳ ಗುಣಮಟ್ಟ ಖಾತ್ರಿ ಪಡಿಸಿಕೊಂಡು ನಿಗದಿತ ದರಗಳಲ್ಲಿ ಮಾರಾಟ ಮಾಡಬೇಕು. ರಸಗೊಬ್ಬರಗಳ ದಾಸ್ತಾನು ದರ ಪಟ್ಟಿಯನ್ನು ಸಾರ್ವಜನಿಕರಿಗೆ ಎದ್ದು ಕಾಣುವಂತೆ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಬೇಕು ಎಂದು ಹೇಳಿದರು.

ವಿವಿಧ ಪರಿಕರಗಳನ್ನು ಖರೀದಿಸುವ ರೈತರಿಗೆ ರಸೀದಿಯನ್ನು ಕಡ್ಡಾಯವಾಗಿ ಸೂಕ್ತ ವಿವರಗಳೊಂದಿಗೆ ನೀಡಬೇಕು. ವಿವಿಧ ಪರಿಕರಗಳ ದಾಸ್ತಾನು ವಿವರಗಳನ್ನು ಇಲಾಖೆಗೆ ಕಾಲಕಾಲಕ್ಕೆ ಸಲ್ಲಿಸಬೇಕು. ರಸಗೊಬ್ಬರಗಳನ್ನು ರೈತರ ಆಧಾರ್ ಕಾರ್ಡ್ ಪಡೆದು ಪಿಓಎಸ್ ಯಂತ್ರದ ಮೂಲಕವೇ ವಿತರಿಸಬೇಕು. ರಸಗೊಬ್ಬರ ಬಿತ್ತನೆ ಬೀಜ ಮತ್ತು ಕೀಟನಾಶಕ ಕಾಯ್ದೆಗಳ ಅನುಸಾರ ವಹಿವಾಟು ನಡೆಸಬೇಕು ಎಂದು ತಿಳಿಸಿದರು.

ಜಿಲ್ಲಾ ಕೃಷಿ ಜಾಗೃತಿ ದಳದ ಸಹಾಯಕ ನಿರ್ದೇಶಕ ಮುಜೀಬ್ ವುರ್ ರಹಮನ್ ಮಾತನಾಡಿ, ವಿವಿಧ ಕೃಷಿ ಪರಿಕರಗಳನ್ನು ನಿಗದಿತ ದರದಲ್ಲಿ ಮಾರಾಟ ಮಾಡಬೇಕು. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಡಿಎಪಿ ಗೊಬ್ಬರ ಸರಬರಾಜು ಮತ್ತು ವಿತರಣೆಯನ್ನು ವ್ಯವಸ್ಥಿತವಾಗಿ ಮಾಡಬೇಕು. ಡಿಎಪಿ ಗೊಬ್ಬರದ ಬದಲಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಸಂಯುಕ್ತ ಗೊಬ್ಬರಗಳನ್ನು ಬಳಸಲು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮಾರಾಟಗಾರರಿಗೆ ಸೂಚಿಸಿದರು.

ಡಿಎಪಿ ಗೊಬ್ಬರದಲ್ಲಿ ಸಾರಜನಕ ಮತ್ತು ರಂಜಕ ಪ್ರಧಾನ ಪೋಷಕಾಂಶಗಳು ಮಾತ್ರ ಇವೆ. ಬೆಳೆಗಳಿಗೆ ಬೇಕಾಗುವ ಪ್ರಮುಖ ಇನ್ನೊಂದು ಪ್ರಧಾನ ಪೋಷಕಾಂಶ ಪೊಟ್ಯಾಶ್ ಇರುವುದಿಲ್ಲ. ಇದರಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಡಿಎಪಿ ಬಳಸುವುದರಿಂದ ಮಣ್ಣಿನಲ್ಲಿ ರಂಜಕ ಅಂಶ ಹೆಚ್ಚಾಗುತ್ತದೆ. ಅಗತ್ಯವಾದ ಲಘು ಪೋಷಕಾಂಶಗಳಾದ ಸತು (ಜಿಂಕ್) ಮತ್ತು ಕಬ್ಬಿಣದ ಕೊರತೆ ಉಂಟಾಗುತ್ತದೆ. ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಹೇಳಿದರು.

ಶಿರಸ್ತೇದಾರ ಸಿದ್ದಾರ್ಥ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ಪಾಟೀಲ್, ಕೃಷಿ ಅಧಿಕಾರಿಗಳಾದ ಹರ್ಷ ನಾಯಕ, ಬಾಲಾಜಿ ನಾಯ್ಕ, ಪುರುಷೋತ್ತಮ, ಪರಮೇಶ್ವರ ರೆಡ್ಡಿ, ಕೃಷಿ ಇಲಾಖೆಯ ಸಿಬ್ಬಂದಿ ಮತ್ತು ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರು ಸಭೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

49 ಕೋಟಿ ರು. ಲಾಟರಿ - ಹೆಣ್ಣುಮಗು ತಂದ ಅದೃಷ್ಟ !
ಬ್ರಹ್ಮಕಲಶೋತ್ಸವದಿಂದ ಧಾರ್ಮಿಕ ಪ್ರಜ್ಞೆ: ಹರಿನಾರಾಯಣ ದಾಸ ಆಸ್ರಣ್ಣ