ಕನ್ನಡಪ್ರಭ ವಾರ್ತೆ ಸಕಲೇಶಪುರ
ಹಿಂದೆಯು ಹಲವು ಕಾಮಗಾರಿ ಬಾಕಿ:
ಉಸುಕಿನಿಂದ ಮುಚ್ಚಿಹೋಗಿದ್ದ ಕೆರೆಯನ್ನು ಅಭಿವೃದ್ಧಿಗೊಳಿಸುವ ವಿಚಾರ ೨೦೦೪-೦೫ರಲ್ಲಿ ಮುನ್ನಲೆಗೆ ಬಂದಿದ್ದು ಹಲವು ಎಡರುತೊಡರುಗಳ ನಡುವೆ ಅಂದು ಕೇಂದ್ರದಲ್ಲಿ ಪ್ರಭಾವಿ ಅಧಿಕಾರಿಯಾಗಿದ್ದ ಬೈಕೆರೆ ನಾಗೇಶ್ ಸಹಕಾರದಿಂದಾಗಿ ಸಣ್ಣ ಕೆರೆಗಳ ಅಭಿವೃದ್ಧಿ ನಿಗಮದ ವತಿಯಿಂದ ೯೫ ಲಕ್ಷ ರು.ಗಳ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿತ್ತು. ಆದರೆ, ಕಾಮಗಾರಿ ಮುಗಿಯುವ ವೇಳೆಗೆ ಈ ಯೋಜನೆ ಮೊತ್ತ ೧.೬೫ ಕೋಟಿ ತಲುಪಿದ್ದು, ಈ ಯೋಜನೆಯಲ್ಲಿ ಕೆರೆಯ ಹೋಳು ತೆಗೆಯುವುದು, ಕೆರೆಯ ಸುತ್ತ ತಂತಿ ಬೇಲಿ ನಿರ್ಮಿಸುವುದು, ಉದ್ಯಾನವನ, ಬಾಲವನ, ಕೆರೆಮಧ್ಯದಲ್ಲಿ ಕಾರಂಜಿ ನಿರ್ಮಾಣ, ಕರೆಯ ಸುತ್ತ ವಿದ್ಯುತ್ ದೀಪ ಆಳವಡಿಕೆಮಾಡುವುದು ಹಾಗೂ ಕೆರೆಯ ಮೇಲ್ಭಾಗದಿಂದ ಹರಿದು ಬರುವ ಕಲುಷಿತ ನೀರು ಕೆರೆ ಸೇರುವುದನ್ನು ತಪ್ಪಿಸುವುದು ಮತ್ತು ಪೆಡಲ್ ಬೋಟ್ ವ್ಯವಸ್ಥೆ ಮಾಡುವುದು ಈ ಯೋಜನೆಯಲ್ಲಿ ಸೇರಿತ್ತು. ಆದರೆ, ಅಂದು ಕೆರೆ ಅಭಿವೃದ್ಧಿಗೊಳಿಸಿದ ಗುತ್ತಿಗೆದಾರ ಹೂಳು ತೆಗೆದು, ಬೇಲಿ ನಿರ್ಮಿಸಿ ಕೈತೊಳೆದುಕೊಂಡಿದ್ದಾರೆ. ಯೋಜನೆಯಲ್ಲಿ ಸೇರಿರುವ ಉಳಿಕೆ ಕೆಲಸ ಮಾಡುವಂತೆ ಹಲವರು ಗುತ್ತಿಗೆದಾರರನ್ನು ಆಗಾಗ ಒತ್ತಾಯಿಸುತ್ತಿದ್ದರು. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸುತ್ತಿದ್ದ ವೇಳೆಯು ಅಧಿಕಾರಿಗಳು ಅವರು ಮಾಡಿದ ಕಾಮಗಾರಿಗೆ ಮಾತ್ರ ಬಿಲ್ ನೀಡಲಾಗಿದೆ ಎಂದು ಉತ್ತರ ನೀಡುತ್ತಿದ್ದರು. ಇದರಿಂದಾಗಿ ಉಳಿಕೆ ಹಣ ಸಣ್ಣ ನೀರಾವರಿ ಇಲಾಖೆಯಲ್ಲಿ ಉಳಿದಿದೆ ಎಂದೆ ಎಲ್ಲರೂ ನಂಬಿದ್ದರು ಆದರೆ, ವರ್ಷಗಳು ಉರುಳಿದಂತೆ ಈ ಹಣ ಸಹ ಸಂಪೂರ್ಣ ಬಿಡುಗಡೆಯಾಗಿದ್ದು ಕೆಲಸ ಮಾಡದೆ ಗುತ್ತಿಗೆದಾರ ಬಿಲ್ ಪಡೆದಿರುವ ಬಗ್ಗೆ ದೂರು ನೀಡಲು ಈಗ ಕೆಲವರು ಮುಂದಾಗಿದ್ದಾರೆ. ಕಣ್ಣು ಕಾಣದ ಕೆಎಸ್‌ಆರ್‌ಟಿಸಿ:ದೊಡ್ಡ ಕೆರೆಗೆ ಸಮೀಪ ಬಸ್ ನಿಲ್ದಾಣವಿದ್ದು ಬಸ್ ನಿಲ್ದಾಣದ ಶೌಚಗೃಹದ ತೊಟ್ಟಿ ದೊಡ್ಡಕೆರೆಗೆ ಹೊಂದಿಕೊಂಡಿದೆ. ಪ್ರಯಾಣಿಕರ ಸಾಮರ್ಥ್ಯಕ್ಕೆ ತಕ್ಕಂತೆ ಶೌಚತೊಟ್ಟಿ ಮಾಡದ ಕಾರಣ ವರ್ಷವಿಡೀ ತೊಟ್ಟಿಯಿಂದ ಶೌಚ ಹೊರಹೋಗುತ್ತಿದ್ದು ಇದು ನೇರವಾಗಿ ದೊಡ್ಡಕೆರೆಯನ್ನು ಸೇರುತ್ತಿದೆ. ಇದರಿಂದಾಗಿ ದುರ್ನಾತ ಬೀರುತ್ತಿದ್ದು, ದೊಡ್ಡಕೆರೆ ಸುತ್ತ ವಾಯುವಿವಾರ ನಡೆಸುವ ಪ್ರತಿಯೊಬ್ಬರು ಸುಮಾರು ನೂರು ಮೀಟರ್ ವ್ಯಾಪ್ತಿಯಲ್ಲಿ ಮೂಗು ಹಿಡಿದು ಸಂಚರಿಸುತ್ತಾರೆ. ಈ ಬಗ್ಗೆ ವಾಯು ವಿಹಾರಿಗಳು, ಸಾರ್ವಜನಿಕರು, ಸಂಘಟನೆಗಳು ಕಳೆದ ಒಂದು ದಶಕದ ಅವಧಿಯಲ್ಲಿ ಹತ್ತಾರು ಬಾರಿ ಪ್ರತಿಭಟನೆ ನಡೆಸಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜವಾಗಿಲ್ಲ. ಸ್ಥಳೀಯ ಕೆಎಸ್‌ಆರ್‌ಟಿಸಿ ಘಟಕಕ್ಕೆ ಹಿರಿಯ ಅಧಿಕಾರಿಗಳು ಬಂದ ವೇಳೆ ಶಾಸಕರ ನೇತೃತ್ವದಲ್ಲಿ ಮನವಿ ಮಾಡಿದ್ದರೂ ಜಾಣಕುರುಡುತನ ಪ್ರದರ್ಶಿಸುತ್ತಿರುವ ಇಲಾಖೆಯ ವಿರುದ್ಧ ಸಾರ್ವಜನಿಕರು ತೀವ್ರವಾದ ಅಸಮಾಧಾನ ಹೊರಹಾಕಿ ಇನ್ನೂ ಕೆಲವೇ ದಿನಗಳಲ್ಲಿ ಶೌಚತೊಟ್ಟಿ ಬದಲಿಸಬೇಕು ತಪ್ಪಿದಲ್ಲಿ ಸಾರ್ವಜನಿಕರೆ ಇದನ್ನು ದ್ವಂಸಗೊಳಿಸುವ ಎಚ್ಚರಿಕೆ ನೀಡಿ ವರ್ಷಗಳು ಉರುಳಿದರೂ ಯಾವುದೇ ಪ್ರಯೋಜವಾಗಿಲ್ಲ.ದಾಖಲೆಗಳ ಜಿಜ್ಞಾಸೆ:
ದೊಡ್ಡಕೆರೆ ಅಭಿವೃದ್ಧಿಗೊಳಿಸಿರುವ ಸಣ್ಣ ಕೆರೆಗಳ ಅಭಿವೃದ್ಧಿ ನಿಗಮ ಕೆರೆಯ ನಿರ್ವಹಣೆಯನ್ನು ಪುರಸಭೆಗೆ ಹಸ್ತಾಂತರಿಸ ಬೇಕಿದೆ. ಆದರೆ, ಸಣ್ಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ ಕೆರೆ ಅಭಿವೃದ್ಧಿಗೊಳಿಸುವ ವೇಳೆ ನಮಗೆ ಕೆರೆಯ ಯಾವುದೇ ದಾಖಲೆಗಳನ್ನು ಯಾವುದೇ ಇಲಾಖೆ ನೀಡಿಲ್ಲ. ಸರ್ಕಾರದಿಂದ ಸೂಚಿಸಿದ ಕೆಲಸವನ್ನು ನಿರ್ವಹಿಸಿದ್ದೆವೆ. ಈಗ ಕೆರೆಯ ನಿರ್ವಹಣೆಯನ್ನು ಪುರಸಭೆಗೆ ಹಸ್ತಾಂತರಿಸಲು ಯಾವ ದಾಖಲೆಗಳನ್ನು ಪುರಸಭೆಗೆ ನೀಡುವುದು ಎಂಬ ಪ್ರಶ್ನೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳದ್ದು. ಇದರಿಂದಾಗಿ ನಿರ್ವಹಣೆ ಪ್ರಶ್ನೆ ಪ್ರತಿವರ್ಷ ತಲೆದೂರುತ್ತಿದ್ದು ಕೆರೆಯ ಸುತ್ತಲಿನ ಪ್ರದೇಶ ಗಿಡಗಂಟಿಗಳಿಂದ ತುಂಬಿ ಹೋಗುತ್ತಿದೆ. ಈ ಗಿಡಗಂಟಿಗಳ ಪೊದೆಯನ್ನು ಕೆಲವೊಮ್ಮೆ ಸಂಘಸಂಸ್ಥೆಗಳು ತೆರವುಗೊಳಿಸಿದರೆ, ಮತ್ತೆ ಕೆಲವೊಮ್ಮೆ ವಾಯುವಿಹಾರಿಗಳು ಚಂದದ ಹಣದಲ್ಲಿ ಸ್ವಚ್ಛಗೊಳಿಸಿಕೊಳ್ಳುತ್ತಿದ್ದಾರೆ. * ಹೇಳಿಕೆ: 1ಸಣ್ಣ ನೀರಾವರಿ ಇಲಾಖೆಗೆ ಸೇರುವ ಕೆರೆಯನ್ನು ಪುರಸಭೆಯ ಸ್ವಂತ ಅನುದಾನ ಬಳಸಿ ಅಭಿವೃದ್ಧಿಗೊಳಿಸುವುದಕ್ಕೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸುತ್ತಿಲ್ಲ. ಆದ್ದರಿಂದ, ಹಲವು ದಿನಗಳಿಂದ ಟೆಂಡರ್ ಪ್ರಕ್ರಿಯೆ ಬಾಕಿ ಉಳಿದಿದೆ.
- ಜ್ಯೋತಿ ರಾಜ್‌ಕುಮಾರ್, ಪುರಸಭೆ ಅಧ್ಯಕ್ಷರು* ಹೇಳಿಕೆ:2ಜಾತ್ರೆ ಮಹೋತ್ಸವದ ಉಳಿಕೆ ಹಣ ದುರ್ಬಳಕೆಯಾಗಬಾರದು ಎಂಬ ಉದ್ದೇಶದಿಂದ ಕೆರೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುದಾನ ಮೀಸಲಿಟ್ಟು ವರ್ಷಗಳು ಕಳೆದಿದೆ. ಆದರೆ ಇದುವರೆಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂಬುದು ಆಶ್ಚರ್ಯ.
-ಡಾ. ಎಂ.ಕೆ ಶೃತಿ. ಉಪವಿಭಾಗಾಧಿಕಾರಿ ದೊಡ್ಡಕೆರೆ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದರೂ ಟೆಂಡರ್ ಕರೆಯುತ್ತಿಲ್ಲ ಎಂಬ ದೂರು ಹಾಗೂ ಕೆರೆ ಒಡೆತನ ಪುರಸಭೆಗೆ ಸೇರಿಲ್ಲ ಎಂಬ ಪುರಪಿತೃಗಳ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.- ಸಿಮೆಂಟ್ ಮಂಜು ಶಾಸಕ