ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಹೃದಯ ಭಾಗದಲ್ಲಿರುವ ಬಿ.ಎಚ್. ರಸ್ತೆಯಲ್ಲಿ ಹಿಂದೂಪುರ ಬಸ್ ನಿಲ್ದಾಣದ ಸಮೀಪ ಕಳೆದ ಒಂದೂವರೆ ತಿಂಗಳಿನಿಂದ ಒಡೆದ ನೀರಿನ ಪೈಪ್ ಅಳವಡಿಸಲು ರಸ್ತೆ ಅಗೆದ ಮಣ್ಣು ತೆಗೆದ ಮಣ್ಣನ್ನು ತೆರವು ಮಾಡಿಲ್ಲ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನಗರಕ್ಕೆ ಪಿನಾಕಿನಿ ನದಿಯ ಕಿಂಡಿ ಅಣೆಕಟ್ಟು ಸಮೀಪದಿಂದ ನೀರು ಸರಬರಾಜು ಮಾಡುವ ದೊಡ್ಡ ಪೈಪ್ ಒಂದು ಒಡೆದಿದ್ದ ಪರಿಣಾಮ ನೀರು ಸೋರಿಕೆಯಾಗುತ್ತಿತ್ತು. ಕೂಡಲೇ ನಗರಸಭೆ ಅಧ್ಯಕ್ಷರಾದ ಲಕ್ಷ್ಮಿನಾರಾಯಣಪ್ಪ ಅಧಿಕಾರಿಗಳಿಗೆ ತಿಳಿಸಿ ಒಂದು ವಾರದಲ್ಲಿ ಒಡೆದ ಪೈಪ್ ಅನ್ನು ದುರಸ್ತಿ ಮಾಡಿಸಿದ್ದರು.ರಸ್ತೆ ಮಧ್ಯೆ ಮಣ್ಣಿನ ಗುಡ್ಡೆಆದರೆ ದುರಸ್ತಿ ಕಾರ್ಯ ನಡೆದ ಬಳಿಕ ಅಗೆದಿದ್ದ ಮಣ್ಣಿನ ಗುಡ್ಡೆಯು ರಸ್ತೆಯ ಮಧ್ಯೆಭಾಗದಲ್ಲಿ ಹಾಗೆ ಉಳಿದಿದ್ದು, ಅದನ್ನು ತೆರವುಗೊಳಿಸಲು ಅಧಿಕಾರಿಗಳು ಮತ್ತು ಸಿಬ್ಬಂಧಿ ನಿರ್ಲಕ್ಷ್ಯ ವಹಿಸಿದ್ದಾರೆ. ಪೈಪ್ ಲೈನ್ ದುರಸ್ತಿ ಕಾಮಗಾರಿ ನಡೆದು ಬರೋಬ್ಬರಿ ಒಂದು ತಿಂಗಳು ಪೂರ್ಣಗೊಂಡಿದೆ, ನಿತ್ಯ ನಗರಸಭೆ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಅನೇಕ ಬಾರಿ ಸಂಚರಿಸುತ್ತಿದ್ದರೂ ಕೂಡ ಇದನ್ನು ಪೂರ್ಣಗೊಳಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವಾರದ ಒಳಗಾಗಿ ಇಲ್ಲಿನ ಅವ್ಯವಸ್ಥೆಯ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಸ್ಥಳೀಯ ನಾಗರೀಕರು, ರೈತ ಪರ ಹೋರಾಟಗಾರರು ಮತ್ತು ಪ್ರಯಾಣಿಕರು ಎಚ್ಚರಿಕೆ ನೀಡಿದ್ದಾರೆ.ಕಳೆದ 2ತಿಂಗಳ ಹಿಂದೆ ನಾಗಯ್ಯರೆಡ್ಡಿ ವೈತ್ತ ಮಸೀದಿ ಮುಂಭಾಗದಲ್ಲಿ ಮತ್ತು ಪೀರುಸಾಭಿಗಲ್ಲಿಯ ತಿರುವಿನಲ್ಲಯೂ ಸಹ ರಿಪೇರಿ ಕಾಮಗಾರಿಗೆಂದಿ ಅಗೆದ ಗುಂಡಿಯನ್ನು ಸರಿಯಾಗಿ ಮುಚ್ಚಿಲ್ಲ.
ವಾರದೊಳಗೆ ಮಣ್ಣು ತೆರವುಆದರೆ ಈ ಬಗ್ಗೆ ಗುತ್ತಿಗೆದಾರ ಲಕ್ಷ್ಮಣರೆಡ್ಡಿ ಹೇಳುವುದೇ ಬೇರೆ. ಅವರ ಪ್ರಕಾರ ಈ ಕಾಮಗಾರಿಗೆ ನಗರಸಭೆ ಯಾವುದೇ ಟೆಂಡರ್ ನೀಡಿಲ್ಲ. ಸಾರ್ವಜನಿಕರು ನೀರಿಗಾಗಿ ಪರದಾಡುವುದು ಬೇಡವೆಂದು ಸಾಮಾಜಿಕ ಕಳಕಳಿಯಿಂದ ಕೆಲಸವನ್ನು ನೀರಿನ ಪೈಪ್ ದುರಸ್ತಿ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಸಮಸ್ಯೆಯನ್ನು ಸರಿಪಡಿಸಿಕೊಡುವುದಾಗಿ ತಿಳಿಸಿದರು.