ಹಳೆಯ ಬಸ್‌ಪಾಸ್ ಮುಂದುವರಿಸಲು ಆಗ್ರಹ

KannadaprabhaNewsNetwork |  
Published : Jun 12, 2025, 12:40 AM IST
ಗಜೇಂದ್ರಗಡ ಬಸ್ ನಿಲ್ದಾಣ | Kannada Prabha

ಸಾರಾಂಶ

ಶಾಲೆಗಳು ಆರಂಭಗೊಂಡು ೧೩ ದಿನಗಳು ಕಳೆದಿದ್ದರೂ ವಿದ್ಯಾರ್ಥಿಗಳಿಗೆ ಬಸ್ ಪಾಸ್‌ಗಳು ದೊರೆಯದ ಪರಿಣಾಮ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಳೆಯ ಪಾಸ್‌ಗಳ ಮೇಲೆ ಪ್ರಯಾಣಕ್ಕೆ ಅವಕಾಶ ನೀಡಿ ಎಂಬ ಆಗ್ರಹಗಳು ಕೇಳಿ ಬರುತ್ತಿದೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಶಾಲೆಗಳು ಆರಂಭಗೊಂಡು ೧೩ ದಿನಗಳು ಕಳೆದಿದ್ದರೂ ವಿದ್ಯಾರ್ಥಿಗಳಿಗೆ ಬಸ್ ಪಾಸ್‌ಗಳು ದೊರೆಯದ ಪರಿಣಾಮ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಳೆಯ ಪಾಸ್‌ಗಳ ಮೇಲೆ ಪ್ರಯಾಣಕ್ಕೆ ಅವಕಾಶ ನೀಡಿ ಎಂಬ ಆಗ್ರಹಗಳು ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಮೇ ೩೦ರಿಂದ ಸರ್ಕಾರಿ ಶಾಲೆಗಳು ಆರಂಭಗೊಂಡಿವೆ. ಆದರೆ ಸಾರಿಗೆ ಸಂಸ್ಥೆಯಿಂದ ಬಸ್ ಪಾಸ್‌ಗಳು ಲಭ್ಯವಾಗದ ಪರಿಣಾಮ ಪಟ್ಟಣಕ್ಕೆ ಇಟಗಿ, ನರೇಗಲ್ ಹಾಗೂ ರೋಣ ಪಟ್ಟಣಕ್ಕೆ ತೆರಳುವ ವಿದ್ಯಾರ್ಥಿಗಳು ಟಿಕೆಟ್‌ ಖರೀದಿಸಬೇಕಾಗಿ ಬಂದಿದೆ. ಬಡಕುಟುಂಬಗಳಿಗೆ ಇದು ಹೊರೆಯಾಗಿದೆ.

ಪಟ್ಟಣ, ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು, ನೆರೆಯ ತಾಲೂಕಿನ ಹೊಳೆಆಲೂರ, ಯಾವಗಲ್, ಬೆಳವಣಿಕಿ ಸೇರಿ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಇಟಗಿ ಗ್ರಾಮದ ಆದರ್ಶ ಶಾಲೆಗೆ ತೆರಳುತ್ತಾರೆ. ರಾಜೂರ, ದಿಂಡೂರ, ಕಾಲಕಾಲೇಶ್ವರ, ಹಾಲಕೆರೆ, ರಾಂಪುರ, ಕೊಡಗಾನೂರ ಸೇರಿ ವಿವಿಧ ಗ್ರಾಮಗಳಿಂದ ೧೦ನೇ ತರಗತಿ ವರೆಗಿನ ನೂರಾರು ವಿದ್ಯಾರ್ಥಿಗಳು ಗಜೇಂದ್ರಗಡ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಆಗಮಿಸುತ್ತಾರೆ. ಅನೇಕ ಪಾಲಕರು ಬಸ್ ನಿಲ್ದಾಣದ ಮೇಲ್ವಿಚಾರಕರು ಹಾಗೂ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಕರೆ ಮಾಡಿ ವಿಚಾರಿಸಿ ಸುಸ್ತಾಗಿದ್ದಾರೆಯೇ ಹೊರತು ಪಾಸ್‌ ದೊರೆಯುತ್ತಿಲ್ಲ. ಹೊಸ ಬಸ್ ಪಾಸ್ ವಿತರಿಸಲು ಉಂಟಾಗಿರುವ ತಾಂತ್ರಿಕ ತೊಂದರೆಗೆ ಪರಿಹಾರ ಸಿಗುವ ವರೆಗೆ ಹಳೆಯ ಪಾಸ್ ಮೇಲೆ ವಿದ್ಯಾರ್ಥಿಗಳಿಗೆ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂಬ ಆಗ್ರಹ ಪಾಲಕರಿಂದ ಕೇಳಿ ಬರುತ್ತಿದೆ.

ಶಕ್ತಿ ಯೋಜನೆ: ವಿದ್ಯಾರ್ಥಿನಿಯರು ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಆಧಾರ್ ಕಾರ್ಡ್ ತೋರಿಸಿ ಶಾಲೆಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಹಣ ಕೊಟ್ಟು ಪ್ರಯಾಣಿಸಬೇಕಿದೆ. ಶಾಲೆಗೆ ವಿದ್ಯಾರ್ಥಿಗಳು ಬಾರದಿದ್ದರೆ ಶಿಕ್ಷಕರು ಪಾಲಕರಿಗೆ ಕರೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಸೂಚಿಸುತ್ತಿದ್ದಾರೆ.

ರಾಜ್ಯಾದ್ಯಂತ ಬಸ್‌ಪಾಸ್ ಸಮಸ್ಯೆ ಎದುರಾಗಿದ್ದು, ಸಂಬಂಧಿಸಿ ಅಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಸರ್ಕಾರ ಮಟ್ಟದಲ್ಲಿ ಸಮಸ್ಯೆಗೆ ಪರಿಹಾರ ಸಿಗಬೇಕಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸಮಸ್ಯೆಯಿಲ್ಲ. ೧ರಿಂದ ೧೦ನೇ ತರಗತಿಗಳಿಗೆ ಎದುರಾಗಿರುವ ಸಮಸ್ಯೆಗೆ ಒಂದೆರೆಡು ದಿನದಲ್ಲಿ ಪರಿಹಾರ ಸಿಗಲಿದೆ ಎನ್ನುತ್ತಾರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು.ಹೋರಾಟ ನಡೆಸುತ್ತೇವೆ: ಪಟ್ಟಣದಿಂದ ಇಟಗಿ ಗ್ರಾಮದ ಆದರ್ಶ ಶಾಲೆಗೆ ತೆರಳುವ ಹಾಗೂ ಪಟ್ಟಣಕ್ಕೆ ಸುತ್ತಲಿನ ಗ್ರಾಮಗಳಿಂದ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ಟಿಕೆಟ್‌ಗಾಗಿ ಹಣಕೊಟ್ಟು ಕಳುಹಿಸಬೇಕಿದೆ. ಹೀಗಾಗಿ ಸರ್ಕಾರ ಹೊಸ ಪಾಸ್ ನೀಡುವ ವರೆಗೆ ಹಳೆಯ ಬಸ್‌ಪಾಸ್‌ಗಳ ಮೇಲೆ ಪ್ರಯಾಣಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ಅಭಿವೃದ್ಧಿ ವೇದಿಕೆ ಅಧ್ಯಕ್ಷ ವಿನಾಯಕ ಜರತಾರಿ ಹೇಳಿದರು.ಪಟ್ಟಣದಿಂದ ಇಟಗಿ ಗ್ರಾಮದ ಆದರ್ಶ ಶಾಲೆಗೆ ತೆರಳುವ ಮಕ್ಕಳಿಗೆ ಹಣಕೊಟ್ಟು ಕಳುಹಿಸುವುದು ಕಷ್ಟದಾಯಕವಾಗುತ್ತಿದೆ. ಮೇಲಧಿಕಾರಿಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಆಡಳಿತ ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಪಾಲಕರಾದ ಶಿವಾನಂದ ಅರಳಿ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''