ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಅಗತ್ಯ ಭೂಮಿ ಶೀಘ್ರ ಹಸ್ತಾಂತರ: ಸಚಿವ ಡಾ.ಎಚ್‌ಸಿಎಂ

KannadaprabhaNewsNetwork |  
Published : Jun 12, 2025, 12:39 AM IST
6 | Kannada Prabha

ಸಾರಾಂಶ

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಸಂಬಂಧಿಸಿದಂತೆ ಅಗತ್ಯವಿರುವ 240 ಎಕರೆ ಜಮೀನು ವಿಸ್ತರಣೆ ಕಾರ್ಯ ಬಹುಪಾಲು ಪೂರ್ಣಗೊಂಡಿದೆ. 230 ಎಕರೆ ವಶಕ್ಕೆ ಪಡೆಯಲಾಗಿದೆ. ಉಳಿದ 10 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಲು ಅಗತ್ಯವಿರುವ ಜಮೀನು ಸ್ವಾಧೀನ ಪ್ರಕ್ರಿಯೆ ಬಹುಪಾಲು ಪೂರ್ಣಗೊಂಡಿದ್ದು, ಸದ್ಯದಲ್ಲಿಯೇ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ಜಿಪಂನ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ವಿಮಾನ ನಿಲ್ದಾಣ ವಿಸ್ತರಣೆಗೆ ಸಂಬಂಧಿಸಿದಂತೆ ಅಗತ್ಯವಿರುವ 240 ಎಕರೆ ಜಮೀನು ವಿಸ್ತರಣೆ ಕಾರ್ಯ ಬಹುಪಾಲು ಪೂರ್ಣಗೊಂಡಿದೆ. 230 ಎಕರೆ ವಶಕ್ಕೆ ಪಡೆಯಲಾಗಿದೆ. ಉಳಿದ 10 ಎಕರೆ ಭೂಮಿಯನ್ನು ವಶಕ್ಕೆ ಪಡೆಯುವುದಾಗಿ ವಿವರಿಸಿದರು.

ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹೈಟೆನ್ಷನ್ ಮಾರ್ಗಗಳು, ನಾಲೆಗಳನ್ನು ಸ್ಥಳಾಂತರ ಮಾಡುವ ಸಂಬಂಧ ಪ್ರಾಧಿಕಾರಕ್ಕೆ ಜವಾಬ್ದಾರಿ ನೀಡಲು ಚರ್ಚೆ ನಡೆಸಲಾಗಿತ್ತು. ಆದರೆ, ಪ್ರಾಧಿಕಾರವು ರಾಜ್ಯ ಸರ್ಕಾರವೇ ವ್ಯವಸ್ಥೆ ಮಾಡಿಕೊಡುವಂತೆ ಹೇಳಿರುವ ಕಾರಣ 100 ಕೋಟಿ ರೂ.ವೆಚ್ಚದಲ್ಲಿ ಹೈಟೆನ್ಷನ್ ಮಾರ್ಗ ಬದಲಾವಣೆ, ಅಂಡರ್ ಬ್ರಿಡ್ಜ್ ಬಾಕ್ಸ್ ನಾಲೆ ನಿರ್ಮಾಣವನ್ನು ಆರು ತಿಂಗಳಲ್ಲಿ ನಡೆಸುವಂತೆ ಸೂಚಿಸಲಾಗಿದೆ ಎಂದರು.

ಮೈಸೂರು- ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಬದಲಿಸಬೇಕು ಎಂಬ ಕಾರಣಕ್ಕೆ ಬಂಡೀಪಾಳ್ಯದಿಂದ ಹಡಜನ, ಚಿಕ್ಕೇಗೌಡನಹುಂಡಿ, ಕೂಡನಹಳ್ಳಿ ಕಡೆಯಿಂದ ಟೋಲ್‌ಗೆ ಸಂಪರ್ಕ ಕಲ್ಪಿಸಲಾಗುವುದು. ಈ ಬದಲಿ ಮಾರ್ಗಕ್ಕೆ 50 ಎಕರೆ ಜಮೀನು ಬೇಕಾಗುತ್ತದೆ. ಈ ವಿಷಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಾಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು.

ಇಮ್ಮಾವು ಬಳಿ ಚಿತ್ರನಗರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿಸ್ವಾಧೀನಪಡಿಸಿಕೊಳ್ಳಲಾಗಿದೆ. ಅಂದು ನೀಡಲಾದ ಪರಿಹಾರ ಮೊತ್ತ ಕಡಿಮೆ ಎಂಬ ಕಾರಣಕ್ಕೆ ಮತ್ತಷ್ಟು ಪರಿಹಾರ ಕೊಡಲಾಗುತ್ತಿದೆ. ಮೊದಲು ನಾಲ್ಕು ನೂರು ಜನರು ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ 8 ಸಾವಿರ ಜನರು ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಇದರಿಂದಾಗಿ ದಾಖಲೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಹೇಳಲಾಗಿದೆ ಎಂದು ಅವರು ಹೇಳಿದರು.

ಕಬಿನಿ ಬಳಿ ಅಡ್ವೆಂಚರ್ ಸ್ಪೋರ್ಟ್ಸ್:

ಕಬಿನಿ ಜಲಾಶಯ ಸಮೀಪ ಸಾಹಸ ಕ್ರೀಡೆ ನಡೆಸಲು ತೀರ್ಮಾನಿಸಲಾಗಿದೆ. ನೀರಾವರಿ ಇಲಾಖೆ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ಈ ಯೋಜನೆ ನಡೆಯಲಿದೆ. ಕಬಿನಿ ಜಲಾಶಯದ ಬಳಿ ಕ್ರೀಡೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

ನಂಜನಗೂಡು ತಾಲೂಕಿನ ಕೋಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ವಲಯಕ್ಕೆ 800 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲಾಗಿದೆ. ಈಗಾಗಲೇ ಪರಿಹಾರ ಕೂಡ ನೀಡಲಾಗಿದೆ. ಆದರೆ, ಕೆಲವರು ಈಗಲೂ ಹೆಚ್ಚಿನ ಪರಿಹಾರ ಕೊಡುವಂತೆ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ, ಯಾವುದೇ ಆಧಾರ, ದಾಖಲೆ ಇಲ್ಲದಿದ್ದರೂ ಭೂಮಿ ಉಳುಮೆ ಮಾಡುತ್ತಿರುವ ರೈತರಿಂದ ಜಮೀನು ಸ್ವಾಧೀನಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕೈಗಾರಿಕಾ ಪ್ರದೇಶ ಸ್ಥಾಪನೆ ವೇಳೆ ಪರಿಹಾರ ಹಾಗೂ ಉದ್ಯೋಗ ಕಲ್ಪಿಸಲು ಒಪ್ಪಂದವಾಗಿದ್ದರಿಂದ ಅರ್ಹರಿಗೆ ಉದ್ಯೋಗ ಕೊಡಲಾಗಿದೆ. ಅಂತೆಯೇ ಗಾಲ್ಫ್ ಕ್ಲಬ್‌ಸ್ಥಾಪನೆಗೂ ಭೂಮಿ ಸ್ವಾಧೀನ ಮಾಡಿದ ಮೇಲೆ ಸಮಸ್ಯೆಗಳಾಗಿವೆ. ಇದನ್ನು ಪರಿಹರಿಸಲು ಗಮನಹರಿಸಲಾಗಿದೆ. ಕುಟುಂಬದವರಿಗೆ ಕೆಲಸ ಕೊಡುವ ಜತೆಗೆ, 10 ಎಕರೆಯಲ್ಲಿ ಜನತಾ ಕಾಲೋನಿ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ. ಜತೆಗೆ, ಮಾನವೀಯತೆ ಆಧಾರದ ಮೇಲೆ ಹೆಚ್ಚುವರಿ ಪರಿಹಾರ ಕಲ್ಪಿಸಲು ಕಂಪೆನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸುತ್ತಿರುವುದಾಗಿ ಅವರು ಹೇಳಿದರು.

ಸಭೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಕಬಿನಿ ಮತ್ತು ವರುಣ ನಾಲಾ ವೃತ್ತದ ಅಧೀಕ್ಷಕ ಎಂಜಿನಿಯರ್‌ಕೆ. ಮಹೇಶ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''