ಹಾನಗಲ್ಲ ತಾಲೂಕಿನಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಆಗ್ರಹ

KannadaprabhaNewsNetwork |  
Published : Aug 04, 2025, 12:15 AM IST
ಫೋಟೋ : ೩ಎಚ್‌ಎನ್‌ಎಲ್೨ಹಾನಗಲ್ಲಿನಲ್ಲಿ ನಡೆದ ಸಭೆಯಲ್ಲಿ ರವಿಚಂದ್ರ ಪುರೋಹಿತ ಮಾತನಾಡಿದರು.ಫೋಟೋ : ೩ಎಚ್‌ಎನ್‌ಎಲ್೨ಎಹಾನಗಲ್ಲಿನಲ್ಲಿ ನಡೆದ ಸಭೆಯಲ್ಲಿ ಗುರುರಾಜ ನಿಂಗೋಜಿ ಮಾತನಾಡಿದರು. | Kannada Prabha

ಸಾರಾಂಶ

ಭಾನುವಾರ ಸಂಜೆ ಪಟ್ಟಣದ ಗ್ರಾಮದೇವಿ ಸಭಾಭವನದಲ್ಲಿ ನಡೆದ ವಿವಿಧ ಸಮುದಾಯಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಹಾನಗಲ್ಲ ಭಯದಲ್ಲಿದೆ. ವ್ಯಾಪಾರ ಕಷ್ಟವಾಗಿದೆ ಎಂದರು.

ಹಾನಗಲ್ಲ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ದುರ್ಬಲರು ಅಮಾಯಕರ ಮೇಲೆ ದೌರ್ಜನ್ಯ ಸೇರಿದಂತೆ ನಿರಂತರ ಕಿರುಕುಳ ನಡೆಯುತ್ತಿದ್ದು, ವ್ಯಾಪಾರಸ್ಥರು ವ್ಯಾಪಾರಕ್ಕೆ ಅಂಜುತ್ತಿದ್ದಾರೆ. ಶಾಲೆ- ಕಾಲೇಜುಗಳ ಬಳಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಲು ವ್ಯಾಪಾರಸ್ಥರು ಹಾಗೂ ವಿವಿಧ ಸಮುದಾಯಗಳ ಒಕ್ಕೂಟದ ಸಭೆ ತೀರ್ಮಾನಿಸಿತು.

ಭಾನುವಾರ ಸಂಜೆ ಪಟ್ಟಣದ ಗ್ರಾಮದೇವಿ ಸಭಾಭವನದಲ್ಲಿ ನಡೆದ ವಿವಿಧ ಸಮುದಾಯಗಳ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಹಾನಗಲ್ಲ ಭಯದಲ್ಲಿದೆ. ವ್ಯಾಪಾರ ಕಷ್ಟವಾಗಿದೆ. ಸಾರ್ವಜನಿಕರ ಸಹನೆ ಮೀರಿದೆ. ಇಂತಹ ಘಟನೆಗಳಿಗೆ ಪೊಲೀಸ್ ಸರಿಯಾದ ಕ್ರಮ ಜರುಗಿಸುತ್ತಿಲ್ಲ. ಗಾಂಜಾ ಅಫೀಮು, ಇಸ್ಪೀಟ್, ಓಸಿ ನಿರಾತಂಕವಾಗಿ ನಡೆಯುತ್ತಿವೆ. ಕಿಡಿಗೇಡಿಗಳು ಹಾಗೂ ಮೀಟರ್ ಬಡ್ಡಿ ದಂಧೆಗಾರರು ದುಷ್ಟಶಕ್ತಿಗಳೊಂದಿಗೆ ಕೈ ಜೋಡಿಸಿ ಹಾನಗಲ್ಲನ್ನು ಭಯಭೀತಗೊಳಿಸಿದ್ದಾರೆ. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ರಕ್ಷಣಾ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಪೊಲೀಸ್ ಠಾಣೆಯಲ್ಲಿ ನೊಂದು ಬೆಂದವರು ಅಪರಾಧ ಪ್ರಕರಣ ದಾಖಲಿಸಲು ಮುಂದಾದಾಗ ಇದಕ್ಕೆ ಅವಕಾಶವಾಗುತ್ತಿಲ್ಲ ಎಂದು ಮುಖಂಡರು ದೂರಿದರು.ಇದನ್ನೆಲ್ಲ ಹತ್ತಿಕ್ಕಲು ಜಾಗೃತಿ ಹೋರಾಟ ನಡೆಯಬೇಕು. ಅಪರಾಧಿ ಕೃತ್ಯ ಮಾಡುವವರನ್ನು ಗುರುತಿಸಿ ಕಠಿಣ ಕ್ರಮ ಜರುಗಿಸಬೇಕು. ಅಪರಾಧಿ ಕೃತ್ಯ ನಡೆಯದಂತೆ ಬೇರು ಸಹಿತ ಕಿತ್ತು ಹಾಕಬೇಕು. ಇದಕ್ಕಾಗಿ ಯಾವುದೇ ಹೋರಾಟಕ್ಕೂ ಬದ್ಧರಾಗೋಣ. ಹಾನಗಲ್ಲಿನಲ್ಲಿ ಮಾತ್ರವಲ್ಲ, ಪಟ್ಟಣದಿಂದ ಹಾವೇರಿಯ ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ ನಮ್ಮ ಸಮಸ್ಯೆ ವಿವರಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸೋಣ.

ಅಪರಾಧ ಕೃತ್ಯಗಳ ನಡುವೆ ಏಜಂಟರ ಹಾವಳಿ ಹೆಚ್ಚಾಗಿದೆ. ನಮ್ಮ ಹೋರಾಟ ಸಮಾಜ ಘಾತುಕರು, ದುಷ್ಟ ಶಕ್ತಿಗಳು ಹಾಗೂ ಗೂಂಡಾಗಳ ವಿರುದ್ಧವಾಗಿದೆ. ತಾಲೂಕಿನಲ್ಲಿ ಯಾರ ಮೇಲೆಯಾದರೂ ಇಂತಹ ಕೃತ್ಯಗಳು ನಡೆದರೆ ಒಟ್ಟಾಗಿ ಹೋರಾಟ ಮಾಡೋಣ ಎಂದು ಸಭೆ ನಿರ್ಣಯಿಸಿತು.ಇದಕ್ಕಾಗಿ ಎಲ್ಲ ಸಮುದಾಯಗಳ ಪದಾಧಿಕಾರಿಗಳು, ವಿವಿಧ ವ್ಯಾಪಾರಿ ಸಂಘಗಳು ಹಾಗೂ ಪಟ್ಟಣದ ಹಿರಿಯರನ್ನು ಒಳಗೊಂಡು ಜನಜಾಗೃತಿ ಸಮಿತಿ ರಚಿಸಿ, ಹೋರಾಟಕ್ಕೆ ಸಿದ್ಧರಾಗಲು ಒಕ್ಕೊರಲಿನ ಒಪ್ಪಿಗೆಯನ್ನು ಸಭೆ ಪ್ರಕಟಿಸಿತು. ಇದಕ್ಕಾಗಿ ಶೀಘ್ರ ಹಾನಗಲ್ಲ ಶಾಸಕರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇನ್ನೊಂದು ಸಭೆ ನಡೆಸಿ ನಮ್ಮ ಸಮಸ್ಯೆಗಳ ಅರಿವು ಮೂಡಿಸುವ ಕಾರ್ಯ ನಡೆಯುತ್ತದೆ ಎಂದು ಪ್ರಮುಖರು ಮಾತನಾಡಿದರು.ಸಭೆಯಲ್ಲಿ ಗ್ರಾಮದೇವಿ ಜಾತ್ರಾ ಸಮಿತಿ ಅಧ್ಯಕ್ಷ ಮಂಜಣ್ಣ ನಾಗಜ್ಜನವರ, ಗುರುರಾಜ ನಿಂಗೋಜಿ, ನಾಗೇಂದ್ರ ತುಮರಿಕೊಪ್ಪ, ರವೀಂದ್ರ ದೇಶಪಾಂಡೆ, ಕಲ್ಯಾಣಕುಮಾರ ಶೆಟ್ಟರ, ರವಿಚಂದ್ರ ಪುರೋಹಿತ, ಭೋಜರಾಜ ಕರೂದಿ, ಗಣೇಶ ಮೂಡ್ಲಿಯವರ, ಅನಂತವಿಕಾಸ ನಿಂಗೋಜಿ, ರಾಮೂ ಯಳ್ಳೂರ, ಬಸವರಾಜ ಹಾದಿಮನಿ, ಸುರೇಶ ದೊಡ್ಡಕುರುಬರ, ಚಂದ್ರು ಉಗ್ರಣ್ಣನವರ, ಶಿವಕುಮಾರ ಆಲದಕಟ್ಟಿ, ಲೋಕೇಶ ಕೊಂಡೋಜಿ, ಆದರ್ಶ ಶೆಟ್ಟಿ, ಸುರೇಶ ಸಿಂಧೂರ ಸೇರಿದಂತೆ ಪ್ರಮುಖರು ಮಾತನಾಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ