ಹಾವೇರಿ: ಪೆಂಡಾಲ್ ಶಾಮಿಯಾನ ವೃತ್ತಿ ಮಾಡುವ ಕಾರ್ಮಿಕ ವರ್ಗದವರು ಸಂಘಟಿತರಾಗಬೇಕು. ಭವಿಷ್ಯದಲ್ಲಿ ಪೆಂಡಾಲ್ ಹಾಕುವವರ ಮಕ್ಕಳು ಸರ್ಕಾರಿ ಹುದ್ದೆಗಳನ್ನು ಬೆನ್ನು ಹತ್ತದೆ ತಮ್ಮ ವೃತ್ತಿ ಬದುಕಿನ ಜೀವನದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುಂದುವರಿಯಬೇಕು ಎಂದು ಶ್ರೀಕ್ಷೇತ್ರ ಸೋಂದಾ ಜೈನಮಠದ ಅಭಿನವ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು ತಿಳಿಸಿದರು.ನಗರದ ಸಿಂಧಗಿ ಮಠದ ಆವರಣದಲ್ಲಿ ಶನಿವಾರ ಸಂಜೆ ಜಿಲ್ಲಾ ಪೆಂಡಾಲ್ ಶಾಮಿಯಾನ ಸಪ್ಲಾಯರ್ಸ್ ಅಸೋಸಿಯೇಶನ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಪ್ರತಿ ಹಂತದಲ್ಲಿ ನಡೆಯುವ ಮದುವೆ, ಮುಂಜಿ, ಋತುಮತಿ, ಸೀಮಂತ, ನಾಮಕರಣ, ಗೃಹಪ್ರವೇಶ ಹೀಗೆ ಎಲ್ಲ ಕಾರ್ಯಕ್ರಮಗಳಲ್ಲಿ ಪೆಂಡಾಲ ಶಾಮಿಯಾನದವರ ಪಾತ್ರ ಬಹಳ ಮುಖ್ಯವಾಗಿದೆ. ಇಷ್ಟು ದಿನ ಪೆಂಡಾಲ ಶಾಮಿಯಾನ ಹಾಕುವ ವರ್ಗವನ್ನು ಯಾರು ಗುರುತಿಸುವ ಕೆಲಸ ಮಾಡುತ್ತಿರಲಿಲ್ಲ. ಏಕೆಂದರೆ ಸಂಘಟನೆ ಇರಲಿಲ್ಲ. ಪ್ರತಿಯೊಂದು ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆ ಅವಶ್ಯವಾಗಿದೆ ಎಂದರು.ಶಾಮಿಯಾನ ವೃತ್ತಿಯವರಲ್ಲಿ ಹಿಂಜರಿಕೆ ಮಾಡಿಕೊಳ್ಳಬಾರದು. ಭವಿಷ್ಯದಲ್ಲಿ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಸರ್ಕಾರಿ, ಖಾಸಗಿ ನೌಕರಿಗಳನ್ನು ಪಡೆದುಕೊಳ್ಳುವಂತೆ ಒತ್ತಡ ಹಾಕದೇ ತಾವು ಮಾಡುತ್ತಿರುವ ವೃತ್ತಿಯಲ್ಲಿಯೇ ಹೊಸ ಹೊಸ ತಂತ್ರಜ್ಞಾನವನ್ನು ಮಾರ್ಪಾಡು ಮಾಡಿಕೊಂಡು ಯಶಸ್ಸು ಕಾಣಬೇಕು. ಮುಂಬರುವ ದಿನಗಳಲ್ಲಿ ಪೆಂಡಾಲ್ ಹಾಕುವವರಿಗೆ ಒಳ್ಳೆಯ ಭವಿಷ್ಯವಿದೆ ಎಂದರು.ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಾಣಿಯಂತೆ ಅವರ ತತ್ವಗಳನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡವರು ಪೆಂಡಾಲ, ಶಾಮಿಯಾನ ಕೆಲಸ ಮಾಡುವ ಕಾರ್ಮಿಕರು. ಈ ವೃತ್ತಿಯಲ್ಲಿ ಹಿಂದೂ, ಮುಸ್ಲಿಂ, ಜೈನ್, ಸಿಖ್ ಹೀಗೆ ಸರ್ವಜನಾಂಗದ ಜನರು ಇದ್ದು, ಎಲ್ಲರೂ ಸಂಘಟನೆಯಾಗಬೇಕು ಎಂದರು.ಶಾಮಿಯಾನ ಡೆಕೋರೇಶನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ಕರೀಮ ಅತ್ತಾರ ಮಾತನಾಡಿ, ಇಷ್ಟು ದಿನ ಯಾವುದೇ ಸರ್ಕಾರಗಳು ಇದ್ದರೂ ಪೆಂಡಾಲ ಶಾಮಿಯಾನ ಕೆಲಸ ಮಾಡುವ ವರ್ಗವನ್ನು ಗುರುತಿಸಿರಲಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ನಮ್ಮ ವಲಯವನ್ನು ಅಸಂಘಟಿತ ಕಾರ್ಮಿಕರು ಎಂದು ಘೋಷಿಸಿದ್ದು, ಸ್ವಾಗತಾರ್ಹ ಎಂದರು.ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರೂ ಆದ ರಾಜ್ಯ ಉಪಾಧ್ಯಕ್ಷ ಮಾಣಿಕಚೆಂದ ಲಾಡರ, ಜಿಲ್ಲಾಧ್ಯಕ್ಷ ಮುರುಗೇಶ ಹುಂಬಿ, ಸನ್ಮಾನಿತರಾದ ಶಿವಬಸಯ್ಯನವರು ಆರಾಧ್ಯಮಠ, ಸತೀಶ ಕುಲಕರ್ಣಿ, ಶಂಭು ಬಳಿಗಾರ, ಅಮೃತಮ್ಮ ಶೀಲವಂತರ, ಪರಿಮಳ ಜೈನ್, ಪ್ರಭಾಕರ ಕರಿಶೆಟ್ಟರ, ಪಿ.ಎಫ್. ನದಾಫ, ಮುಖಂಡರಾದ ಮೃತ್ಯುಂಜಯ ಕರನಂದಿ, ದಾವೂದ ಕನಸಾವಿ, ಜಿ. ಬಾಲಗುರುನಾಥಂ, ಅಲ್- ಹಜ್ ಇಜಾಜ್‌ಅಹ್ಮದ ಗುಡಗೇರಿ, ರಾಜೇಸಾಬ್ ಕೆ.ಬಿ.ಎನ್., ನಬೀಸಾಬ ಇಳಕಲ್ಲ, ಟಿಪ್ಪುಸಾಬ ಕದರನಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.