)
ಕೊಪ್ಪಳ: ಮಳೆ ಕೊರತೆಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾಕಾರರು ಖಾಲಿ ಕೊಡ ಹಾಗೂ ಒಣಗಿದ ಬೆಳೆ ಪ್ರದರ್ಶಿಸುತ್ತಾ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಭೀಕರ ಬರಗಾಲ ಈ ನಾಡನ್ನು ಆವರಿಸಿದೆ. ಲಭ್ಯವಿರುವ ಕೃಷಿ ಜಮೀನಿನಲ್ಲಿ ಕೇವಲ 30% ಬಿತ್ತನೆಯಾಗಿದೆ. ವಾಡಿಕೆಗಿಂತ 47% ಕಡಿಮೆ ಮಳೆಯಾಗಿದೆ. ರೈತರು ಗುಳೆ ಹೋಗುತ್ತಿದ್ದಾರೆ. ಕೆಲವರು ಆತ್ಮಹತ್ಯೆ ರೀತಿಯ ಅತಿರೇಕದ ಕ್ರಮಗಳಿಗೆ ಮುಂದಾಗಬಹುದು. ದುರಂತ ಸಂಭವಿಸುವ ಮೊದಲೇ ಕೊಪ್ಪಳವನ್ನು ಬರಪೀಡಿತ ಎಂದು ಘೋಷಿಸಿ ಪರಿಹಾರ ಕಾಮಗಾರಿ ತಕ್ಷಣವೇ ಆರಂಭಿಸಬೇಕು ಎಂದರು.ತಾಂತ್ರಿಕವಾಗಿ ಬರಪೀಡಿತ ಎಂದು ಘೋಷಣೆಯಾದರೆ ಮಾತ್ರ ಹಣ ಬಿಡುಗಡೆ ಮಾಡಲು ಸಾಧ್ಯ. ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ₹175 ಕೋಟಿ ಹಣ ಇದೆ ಎಂದು ಸರ್ಕಾರವೇ ಹೇಳಿದೆ. ಹಾಗಿದ್ದರೆ ಘೋಷಣೆ ಮಾಡಲು ವಿಳಂಬ ಏಕೆ? ಎಂದು ಪ್ರಶ್ನಿಸಿದರು.
ಪ್ರತಿ ಎಕರೆಗೆ ಕನಿಷ್ಠ ₹30,000 ಪರಿಹಾರ ಮಂಜೂರು ಮಾಡಬೇಕು. ಅಕಾಲಿಕವಾಗಿ ಸಾಯುವ ಜಾನುವಾರುಗಳ ರೈತರಿಗೆ ಕಾಮಧೇನು ಮತ್ತು ಅನುಗ್ರಹ ಯೋಜನೆಯಡಿ ಸರ್ಕಾರ ₹62 ಕೋಟಿ ಬಾಕಿ ಇಟ್ಟುಕೊಂಡಿದೆ. ಸುಮಾರು 58,000 ರೈತರು ಆ ಹಣಕ್ಕಾಗಿ ಕಾಯುತ್ತಿದ್ದಾರೆ. ಅವರಲ್ಲಿ ಕೊಪ್ಪಳದ ರೈತರೂ ಇದ್ದಾರೆ.ಈ ಕೂಡಲೇ ಪರಿಹಾರದ ಮೊತ್ತ ಅವರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಮೂರ್ತ್ಯೆಪ್ಪ ಗಿಣಿಗೇರಿ ಮಾತನಾಡಿ, ಕೊಪ್ಪಳ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 3.49 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸಾವಯವ ಬಿತ್ತನೆ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಕೇವಲ 1.63 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಬಹುತೇಕ ಭಾಗಗಳಲ್ಲಿ ಬೆಳೆಗಳು ಕುಂಠಿತಗೊಂಡಿದೆ. ಹಲವೆಡೆ ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ಆದರೂ ಜಿಲ್ಲಾಡಳಿತ ನಿರ್ಲಕ್ಷಿಸುವುದು ಅಕ್ಷಮ್ಯ ಎಂದು ಆರೋಪಿಸಿದರು.
ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿ ಬರಗಾಲ ಆವರಿಸಬಹುದು ಎಂಬ ಮುನ್ಸೂಚನೆ ಮೇ ತಿಂಗಳಿನಲ್ಲಿಯೇ ಇತ್ತು. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಶಾಸಕರು ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ. ಜನರ ಸಮಸ್ಯೆಗಳ ಕುರಿತು ಮಾತನಾಡುವುದನ್ನು ಮರೆತು ಅಧಿಕಾರಕ್ಕಾಗಿ ಹೋರಾಟ ನಡೆಸಿರುವ ಇವರಿಂದ ಏನನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.