ಕಾರಟಗಿ: ಸಾತ್ವಿಕ ಆಹಾರ ಮತ್ತು ಸಾತ್ವಿಕ ವಿಚಾರ ವ್ಯಕ್ತಿಯ ಬದುಕನ್ನು ಸನ್ಮಾರ್ಗದತ್ತ ಕೊಂಡೊಯ್ಯುವುದರ ಜತೆಗೆ ಸ್ವಸ್ಥ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೂ ಭದ್ರ ಅಡಿಪಾಯವಾಗುತ್ತವೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಧ್ಯಕ್ಷ ಅಮರೇಶ ಮೈಲಾಪೂರ ಹೇಳಿದರು.
ಇಂದಿನ ಯುವಜನತೆ ದುಶ್ಚಟ ಹಾಗೂ ಮೊಬೈಲ್ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಶಕ್ತಿ ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಸಮಾಜ, ಶಿಕ್ಷಕರು ಹಾಗೂ ಪಾಲಕರ ಮೇಲಿದೆ. ಸಾತ್ವಿಕ ಆಹಾರ, ಸಾತ್ವಿಕ ವಿಚಾರ ಮತ್ತು ಯೋಗದ ಮೂಲಕ ಆರೋಗ್ಯವಂತ ವ್ಯಕ್ತಿ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸಬಹುದಾಗಿದೆ ಎಂದರು.
ಯೋಗವು ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತವಾಗದೆ ಮಾನಸಿಕ, ನೈತಿಕ ಹಾಗೂ ಸಾಮಾಜಿಕ ಆರೋಗ್ಯ ವೃದ್ಧಿಸುತ್ತದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ನಿರಂತರವಾಗಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಪತಂಜಲಿ ಯೋಗ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪತಂಜಲಿ ಯೋಗ ಸಮಿತಿಯ ಉತ್ತರ ಕರ್ನಾಟಕ ಸಹ ರಾಜ್ಯ ಪ್ರಭಾರಿ ಸಿ.ಎಚ್.ಶರಣಪ್ಪ, ಜೀವನದ ಪ್ರತಿಯೊಂದು ಹಂತದಲ್ಲಿಯೂ ಗುರುವಿನ ಪಾತ್ರ ಅನನ್ಯವಾಗಿದೆ. ನಮಗೆ ಜ್ಞಾನ, ಸಂಸ್ಕಾರ ಹಾಗೂ ಬದುಕಿನ ದಾರಿ ತೋರಿದ ಪ್ರತಿಯೊಬ್ಬರೂ ನಮ್ಮ ಗುರುಗಳೇ ಆಗಿದ್ದು, ಅಂತಹ ಎಲ್ಲ ಗುರುಗಳು ಸದಾ ಗೌರವ ಮತ್ತು ಅಭಿನಂದನೆಗೆ ಅರ್ಹರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ಸಿ.ಎಚ್. ಮೀನಾಕ್ಷಿ, ಉಮಾ ಚಂದ್ರಮೌಳಿ, ಪ್ರಸಾದ್ ಚಿಟ್ಟೂರಿ, ಶರಣೇಗೌಡ, ಶಂಕ್ರಮ್ಮ ಸಜ್ಜನ, ಯೋಗ ಶಿಕ್ಷಕರು, ಶಿಕ್ಷಕರು, ಯೋಗ ಸಾಧಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.