ಕುಷ್ಟಗಿ ತಾಲೂಕು ಬರಪೀಡಿತ ಘೋಷಣೆಗೆ ಆಗ್ರಹ, ರೈತರ ಪಾದಯಾತ್ರೆ

KannadaprabhaNewsNetwork |  
Published : Sep 10, 2026, 02:00 AM IST
ಕುಷ್ಟಗಿ ತಾಲೂಕಿನ ರೈತರು ಕುಷ್ಟಗಿಯನ್ನು ತೀವ್ರ ಬರಪೀಡಿತ ತಾಲೂಕೆಂದು ಘೋಷಿಸುವಂತೆ ಒತ್ತಾಯಿಸಿ ಪಾದಯಾತ್ರೆ ನಡೆಸಿದರು. | Kannada Prabha

ಸಾರಾಂಶ

ಸಮರ್ಪಕ ಮಳೆಯಾಗದೆ ಬೆಳೆಗಳು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪಾದಯಾತ್ರೆ ಆರಂಭಿಸಿದರು.

ಕುಷ್ಟಗಿ: ಸಮರ್ಪಕ ಮಳೆಯಾಗದೆ ಬೆಳೆಗಳು ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಪಾದಯಾತ್ರೆ ಆರಂಭಿಸಿದರು.

ತಾಲೂಕಿನ ಚಳಗೇರ ತಳವಗೇರಿ, ನಿಡಶೇಸಿ, ಹಿರೇ ಬನ್ನಿಗೊಳ ಯಲಬುರ್ತಿ, ಶಾಖಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾದಯಾತ್ರೆ ನಡೆಸಿದರು.

ಮಳೆ ಕೊರತೆಯಿಂದಾಗಿ ಬಿತ್ತನೆ ಮಾಡಿರುವ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ಬೆಳೆಹಾನಿ ಸಮೀಕ್ಷೆ ನಡೆಸಿ, ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.

ಕುಷ್ಟಗಿ ತಾಲೂಕನ್ನು ಕೂಡಲೇ ತೀವ್ರ ಬರಪೀಡಿತ ತಾಲೂಕೆಂದು ಘೋಷಿಸಬೇಕು. ಬರದಿಂದ ರೈತರು ಹಾಗೂ ಕೃಷಿ ಕಾರ್ಮಿಕರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಮರ್ಪಕ ಉದ್ಯೋಗ ಒದಗಿಸಬೇಕು. ಅಲ್ಲದೆ, ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ₹382 ಕೂಲಿಯನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿದರು.

ಬರ ಪರಿಸ್ಥಿತಿಯಿಂದ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಹೀಗಾಗಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕುಡಿಯುವ ನೀರು ಮತ್ತು ಜಾನುವಾರುಗಳ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಬೆಳೆ ನಷ್ಟದಿಂದ ರೈತರು ಸಾಲದ ಹೊರೆ ಎದುರಿಸುತ್ತಿದ್ದು, ಕೃಷಿ ಮುಂದುವರಿಸುವುದೇ ಕಷ್ಟವಾಗಿದೆ. ಆದ್ದರಿಂದ ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರ ಎಲ್ಲ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.

ಈ ಕುರಿತು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯ ಮುಖಂಡ ಆರ್.ಕೆ. ದೇಸಾಯಿ ಮಾತನಾಡಿ, ನಮ್ಮ ಸಮಿತಿಯ ನೇತೃತ್ವದಲ್ಲಿ ಅನೇಕ ಹಳ್ಳಿಗಳ ರೈತರ ಪಾದಯಾತ್ರೆ ಆರಂಭ ಮಾಡಿದ್ದು ಸೆ. 10ರಂದು ಕುಷ್ಟಗಿಯಲ್ಲಿ ಸಮಾವೇಶಗೊಂಡು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುತ್ತದೆ. ರೈತರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರ ಸ್ಪಂದಿಸದಿದ್ದರೆ ಉಪವಾಸ ಸೇರಿದಂತೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತರಾದ ಮುತ್ತಣ್ಣ ನರೇಗಲ್, ಶೇಷಗಿರಿರಾವ್ ದೇಸಾಯಿ, ಸಿದ್ರಾಮಪ್ಪ ಹೊಗಾರ, ಸಂಗಪ್ಪ ತುಪ್ಪದ, ಭೀಮಶಿ, ಮಲ್ಲಿಕಾರ್ಜುನ, ದೊಡ್ಡಪ್ಪ, ಶರಣಪ್ಪ, ದೇವೇಂದ್ರಪ್ಪ ಬಡಿಗೇರ, ಮಂಜುನಾಥ ಹೂಗಾರ, ಈಶಪ್ಪ ದುಗಲದ, ಶರಣಪ್ಪ ದುಗಲದ, ಕಳಕಪ್ಪ ನಿಂಗೋಜಿ ಹಾಗೂ ಬಸಪ್ಪ ಗುದ್ದಿ ಸೇರಿದಂತೆ ಹಲವು ರೈತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಮತಿ ಇಲ್ಲದೆ ನಡೆಸಿದ್ದ ಜಾನಪದ ವಿವಿ 8 ಪಿಜಿ ಕೋರ್ಸ್ ರದ್ದು!
ಕಬ್ಬಿಗೆ ಲಾಭದಾಯಕ ದರ ನಿಗದಿಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ: ರುದ್ರಪ್ಪ ಲಮಾಣಿ