ಲಕ್ಷ್ಮೇಶ್ವರವನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಒತ್ತಾಯ

KannadaprabhaNewsNetwork |  
Published : Jul 15, 2026, 02:30 AM IST
ಪೊಟೋ-ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರೈತರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.  | Kannada Prabha

ಸಾರಾಂಶ

ಕಳೆದ ಒಂದು ತಿಂಗಳಿಂದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾಳಾಗಿದ್ದರಿಂದ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಎಲ್ಲ ಬೆಳೆಗಳಿಗೆ ಬೆಳೆವಿಮೆಯ ಹಣ ಕೊಡಬೇಕು.

ಲಕ್ಷ್ಮೇಶ್ವರ: ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಲಕ್ಷ್ಮೇಶ್ವರ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಸರ್ಕಾರ ಈ ಕೂಡಲೆ ಘೋಷಣೆ ಮಾಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಟಾಕಪ್ಪ ಸಾತಪೂತೆ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಮುಂಗಾರು ಹಂಗಾಮಿನ ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದರಿಂದ ಬೆಳೆಗಳು ನೆಲ ಕಚ್ಚಿವೆ. ಕಳೆದ ಒಂದು ತಿಂಗಳಿಂದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾಳಾಗಿದ್ದರಿಂದ ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಎಲ್ಲ ಬೆಳೆಗಳಿಗೆ ಬೆಳೆವಿಮೆಯ ಹಣ ನೀಡಬೇಕು. ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಬೇಕು ಹಾಗೂ ಬೆಳೆಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಅಧ್ಯಕ್ಷ ಯಲ್ಲಪ್ಪಗೌಡ ಕರಮುಡಿ ಮಾತನಾಡಿ, ಜಿಲ್ಲೆಯಲ್ಲಿ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದರೆ. ಗೋವಿನ ಜೋಳ, ಶೇಂಗಾ, ತೊಗರಿ, ಹೆಸರು, ಇತರೆ ವಾಣಿಜ್ಯ ಬೆಳೆಗಳು ಹಾಳಾಗಿವೆ. ಆದ್ದರಿಂದ ಸರ್ಕಾರ ಗದಗ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವ ಮೂಲಕ ರೈತರಿಗೆ ಮದ್ಯಂತರ ಪರಿಹಾರ ನೀಡಬೇಕು. ರೈತರ ಬೆಳೆಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸೋಮಶೇಖರ ಹಿರೇಮಠ, ಶಂಕ್ರಗೌಡ ಪಾಟೀಲ, ನಿಂಗಪ್ಪ ಬನ್ನಿಕೊಪ್ಪ, ನಾಗರಾಜ ಪಾಟೀಲ, ಬಸವರಾಜ ಮಾಗಳಮಠ, ಬಸವರಾಜ ಬಿದರಕಟ್ಟಿ, ಹನುಮಂತಪ್ಪ ಬಾರ್ಕಿ, ಮಂಜುನಾಥ ಡೊಳ್ಳಿನ, ಮಹ್ಮದ್‌ಸಾಬ ಸಿದ್ದಿ, ಬಸವರಾಜ ಬೆಂತೂರ, ಫಕ್ಕೀರೇಶ ಶಿವಬಸಣ್ಣವರ ಸೇರಿದಂತೆ ಅನೇಕರು ಇದ್ದರು.ಕಟಬಾಕಿ ರೈತರಿಗೆ ಬೆಳೆವಿಮೆ ಪಾವತಿಸಲು ಅನುಮತಿಗೆ ಆಗ್ರಹ

ಲಕ್ಷ್ಮೇಶ್ವರ: ಕಳೆದ ವರ್ಷ ಬೆಳೆಸಾಲ ತುಂಬಲು ವಿಫಲರಾದ ಕಟಬಾಕಿ ಹೊಂದಿರುವ ರೈತರು ಬೆಳೆವಿಮೆ ಪಾವತಿಸಲು ಅನುಮತಿ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡುವಂತೆ ಆಗ್ರಹಿಸಿ ಕರವೇ ಸಂಘಟನೆ ಮಂಗಳವಾರ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.ಈ ವೇಳೆ ಸಂಘಟನೆಯ ತಾಲೂಕು ಅಧ್ಯಕ್ಷ ಲೋಕೇಶ ಸುತಾರ ಮಾತನಾಡಿ, ಕಳೆದ ವರ್ಷ ಅನಿವಾರ್ಯ ಕಾರಣಗಳಿಂದ ಬೆಳೆಸಾಲದ ಕಂತು ಬಾಕಿ ಉಳಿಸಿಕೊಂಡಿರುವ ರೈತರು ಈ ವರ್ಷ ಬೆಳೆವಿಮೆ ತುಂಬಲು ಹೋದರೆ ಬೆಳೆಸಾಲ ಕಟಬಾಕಿ ಇರುವ ರೈತರಿಗೆ ಬೆಳೆವಿಮೆ ತುಂಬಲು ಬರುವುದಿಲ್ಲವೆಂದು ಹೇಳಿ ರೈತರನ್ನು ಬ್ಯಾಂಕ್ ಅಧಿಕಾರಿಗಳು ವಾಪಸ್ ಕಳಿಸುತ್ತಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ.ಈ ವರ್ಷ ಮುಂಗಾರು ಮಳೆಗಳು ಕೈಕೊಟ್ಟಿದ್ದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗುತ್ತಿದೆ. ಆದ್ದರಿಂದ ಬೆಳೆಹಾನಿ ಪರಿಹಾರ, ಬೆಳೆವಿಮೆಯ ಹಣ ಪಡೆಯಲು ಪರದಾಡುವಂತಾಗುತ್ತದೆ. ಜಿಲ್ಲಾಧಿಕಾರಿಗಳು ಲೀಡ್ ಬ್ಯಾಂಕ್‌ಗಳಿಗೆ ಸೂಚನೆ ನೀಡುವ ಮೂಲಕ ರೈತರಿಗೆ ಬೆಳೆವಿಮೆಯ ಕಂತು ಕಟ್ಟಿಸಿಕೊಳ್ಳಲು ತಿಳಿಸಬೇಕು ಎಂದರು.ಈ ವೇಳೆ ಪ್ರವೀಣ ಗಾಣಿಗೇರ, ಚನಬಸಯ್ಯ ಗಡ್ಡದೇವರಮಠ, ಬಸವರಾಜ ಮಲ್ಲೂರ, ಗಂಗಾಧರ ಕೊಂಚಿಗೇರಿಮಠ, ಅರುಣ ಮೆಕ್ಕಿ, ಈರಣ್ಣ ಶಿಗ್ಲಿ, ಗಂಗಾಧರ ಕರ್ಜಕಣ್ಣವರ, ಕುಮಾರ ಕಣವಿ, ವಿನಾಯಕ ಮುಳಗುಂದ, ಸಾವಿತ್ರಿ ಅಣ್ಣಿಗೇರಿ, ಫಕ್ಕೀರೇಶ ಅಣ್ಣಿಗೇರಿ, ಕಿರಣ ಗಾಣಿಗೇರ, ಶರಣು ಗುಡಗೇರಿ, ಸೋಮು ಗೌರಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಗಾರು ಹಂಗಾಮಿನಲ್ಲೇ ಬರಿದಾದ ಚೆಕ್‌ ಡ್ಯಾಂಗಳು
15ನೇ ಹಣಕಾಸು ಅನುದಾನ ವಿಳಂಬ: ಸಂಕಷ್ಟದಲ್ಲಿ ಗ್ರಾಮ ಪಂಚಾಯಿತಿಗಳು