ಲೋಕಾಪುರ ತಾಲೂಕು ಕೇಂದ್ರವೆಂದು ಘೋಷಿಸಲು ಆಗ್ರಹ

KannadaprabhaNewsNetwork |  
Published : Dec 30, 2025, 03:15 AM IST
ಲೋಕಾಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿನ ಲೋಕಾಪುರ ಪಟ್ಟಣವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಹಿರಿಯ ನಾಗರಿಕರ ಸೇವಾ ಸಂಘ ಲೋಕಾಪುರದ ಸದಸ್ಯರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಮುಧೋಳ ತಾಲೂಕಿನಲ್ಲಿನ ಲೋಕಾಪುರ ಪಟ್ಟಣವನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಹಿರಿಯ ನಾಗರಿಕರ ಸೇವಾ ಸಂಘ ಲೋಕಾಪುರದ ಸದಸ್ಯರು ಹಾಗೂ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಂಘದ ಮುಖಂಡ ಎಂ.ಎಂ. ವಿರಕ್ತಮಠ ಅವರು, ಮುಧೋಳ ತಾಲೂಕು ಒಟ್ಟು 68 ಹಳ್ಳಿಗಳನ್ನು ಹೊಂದಿದ್ದು, 94,681 ಹೆಕ್ಟೇರ್‌ ಗಳಷ್ಟು ವಿಸ್ತಾರವಾದ ಭೌಗೋಳಿಕ ಪ್ರದೇಶ ಒಳಗೊಂಡಿದೆ. 2011ರ ಜನಗಣತಿ ಪ್ರಕಾರ ತಾಲೂಕಿನಲ್ಲಿ 2,50,193 ಜನಸಂಖ್ಯೆ ಇದೆ. ಇಷ್ಟೊಂದು ವಿಸ್ತಾರ ಹಾಗೂ ಅಪಾರ ಜನಸಂಖ್ಯೆ ಹೊಂದಿರುವ ತಾಲೂಕಿನ ಗಡಿಭಾಗದ ಪ್ರದೇಶಗಳಿಗೆ ಮೂಲಸೌಲಭ್ಯಗಳು ಮತ್ತು ವಿವಿಧ ಆಡಳಿತಾತ್ಮಕ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವುದು ಸದ್ಯದ ವ್ಯವಸ್ಥೆಯಲ್ಲಿ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಪುರ ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.

ಮುಖಂಡ ಶಿವಾನಂದ ಉದಪುಡಿ ಮಾತನಾಡಿ, ಲೋಕಾಪುರ ಹೋಬಳಿಯ ಅನೇಕ ಗ್ರಾಮಗಳು ತಾಲೂಕು ಕೇಂದ್ರದಿಂದ ಸರಾಸರಿ 25 ಕಿಮೀ ದೂರದಲ್ಲಿವೆ. ದಿನನಿತ್ಯದ ಸರ್ಕಾರಿ ವ್ಯವಹಾರಗಳಿಗಾಗಿ ಗ್ರಾಮಸ್ಥರು 50 ಕಿಮೀ ಗಳಷ್ಟು ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಸಮಯ ಹಾಗೂ ಹಣದ ನಷ್ಟವಾಗುವುದರೊಂದಿಗೆ ಸಾರ್ವಜನಿಕರಿಗೆ ಆಡಳಿತಾತ್ಮಕ ತೊಂದರೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.

ಮುಖಂಡರಾದ ಎಂ.ಎಂ. ವಿರಕ್ತಮಠ, ಎಸ್.ಎನ್. ಹಿರೇಮಠ, ಶಿವಾನಂದ ಉದಪುಡಿ, ಲೋಕಣ್ಣ ಕತ್ತಿ, ವಿ.ಬಿ. ಮಾಳಿ, ಲೋಕಣ್ಣ ಕೊಪ್ಪದ, ಬಸನಗೌಡ ಪಾಟೀಲ, ಬಿ.ಎಲ್. ಬಬಲಾದಿ, ಸದಾಶಿವ ಹಗ್ಗದ, ಯಮನಪ್ಪ ಹೊರಟ್ಟಿ, ಪ್ರಮೋದ ತೆಗ್ಗಿ, ಬಸವರಾಜ ಉದಪುಡಿ, ಪ್ರಕಾಶ್ ಚಳುಕಿ, ಅರುಣ ನರಗುಂದ, ತುಳಜಾಪ್ಪ ಮುದ್ದಾಪುರ, ಮಾಜಿ ಸೈನಿಕ ಸಿ.ಎಂ. ಪಾಟೀಲ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಿ.ವಿ. ಹಲಕಿ, ಹೊಳ ಬಸು ದಂಡಿನ, ಚಂದ್ರಕಾಂತ ರಂಗಣ್ಣವರ, ಮಲ್ಲಪ್ಪ ಅಂಗಡಿ, ದೇವಣ್ಣ ದಾಸರಡ್ಡಿ, ನಾರಾಯಣ ಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಲೋಕಣ್ಣ ಉಳ್ಳಾಗಡ್ಡಿ ಸೇರಿ ಅನೇಕರು ಉಪಸ್ಥಿತರಿದ್ದರು.

ಕಾರಣಗಳಿಂದ ಮುಧೋಳ ತಾಲೂಕಿನ ಲೋಕಾಪುರ ಹೋಬಳಿಯ ಸಮಗ್ರ ಅಭಿವೃದ್ಧಿ ಕುಂಠಿತವಾಗಿದ್ದು, ಜನರು ವಿವಿಧ ಆಡಳಿತಾತ್ಮಕ ಹಾಗೂ ವ್ಯವಹಾರ ಸಂಬಂಧಿತ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಲೋಕಾಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿದರೆ ಆಡಳಿತ ವ್ಯವಸ್ಥೆ ಜನರಿಗೆ ಸಮೀಪವಾಗುವುದರೊಂದಿಗೆ ಅಭಿವೃದ್ಧಿಗೆ ವೇಗ ಸಿಗಲಿದೆ.ಜಿಲ್ಲಾಧಿಕಾರಿಗಳು ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳಬೇಕು.

- ಎಂ.ಎಂ. ವಿರಕ್ತಮಠ ಹಿರಿಯ ನಾಗರಿಕರ ಸೇವಾ ಸಂಘ ಲೋಕಾಪುರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಜತೆ ಅನುಚಿತ ವರ್ತನೆ - ವಾರದ ಬಳಿಕವೂ ಬೀಳುತ್ತೆ ಕೇಸ್
ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ