ಕಾರವಾರ: ಭೌಗೋಳಿಕ, ನೈಸರ್ಗಿಕ ಹಾಗೂ ಕಾನೂನಾತ್ಮಕ ಅಂಶಗಳ ಆಧಾರದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಗುಡ್ಡಗಾಡು ಜಿಲ್ಲೆ ಎಂದು ಘೋಷಿಸಬೇಕು. ಅಲ್ಲದೆ, ಜಿಲ್ಲೆಯನ್ನು ಪರಿಸರ ವಿರೋಧಿ ಬೃಹತ್ ಯೋಜನೆಗಳಿಂದ ಮುಕ್ತಗೊಳಿಸುವ ಕುರಿತು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಮಾರ್ಚ್ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬೆಂಗಳೂರು ಚಲೋ ಹೋರಾಟ ಸಂಘಟಿಸಲಾಗುವುದು ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನೈಸರ್ಗಿಕ ವಿಕೋಪಗಳು, ಪರಿಸರ ವಿರೋಧಿ ಯೋಜನೆಗಳು ಹಾಗೂ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮತೆಯನ್ನು ಬಿಂಬಿಸುವ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಸರ್ಕಾರಕ್ಕೆ ಆಗ್ರಹ ಮಂಡಿಸಿದರು.ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆ ಹಾಗೂ ಪರಿಸರ ಸೂಕ್ಷ್ಮತೆ, ಸಮುದ್ರ ಮಟ್ಟದಿಂದ 600 ಮೀಟರ್‌ಗಿಂತ ಹೆಚ್ಚಿನ ಎತ್ತರದ ಪ್ರದೇಶಗಳು, ಜಿಲ್ಲೆಯ ಶೇ. 80ರಷ್ಟು ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾಗಿರುವುದು ಹಾಗೂ ಜಿಲ್ಲಾಡಳಿತ ಗುರುತಿಸಿರುವ 100ಕ್ಕೂ ಹೆಚ್ಚು ಗುಡ್ಡ ಕುಸಿತದ ಸೂಕ್ಷ್ಮ ಪ್ರದೇಶಗಳು ಉತ್ತರ ಕನ್ನಡವನ್ನು ಗುಡ್ಡಗಾಡು ಜಿಲ್ಲೆ ಎಂದು ಘೋಷಿಸಲು ಪ್ರಮುಖ ಆಧಾರಗಳಾಗಿವೆ ಎಂದು ರವೀಂದ್ರ ನಾಯ್ಕ ಹೇಳಿದರು.ಕಸ್ತೂರಿರಂಗನ್ ವರದಿಯಲ್ಲಿ ಜಿಲ್ಲೆಯ 11 ತಾಲೂಕುಗಳ 567 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 80 ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ವಾಸಿಸುತ್ತಿದ್ದು, ಜಿಲ್ಲೆಯ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಅರಣ್ಯ ಭೂಮಿಯ ವಾಸ್ತವ್ಯ ಹಾಗೂ ಸಾಗುವಳಿಯನ್ನು ಅವಲಂಬಿಸಿದ್ದಾರೆ. ಅರಣ್ಯವಾಸಿಗಳು ವಾಸ್ತವ್ಯ ಮತ್ತು ಸಾಗುವಳಿಗಾಗಿ ಬಳಸುತ್ತಿರುವ ಅರಣ್ಯ ಪ್ರದೇಶ ಸುಮಾರು 18 ಸಾವಿರ ಹೆಕ್ಟೇರ್ ಮಾತ್ರ ಎಂದು ಅವರು ವಿವರಿಸಿದರು.ಭೂಕುಸಿತದ ಭೀತಿ, ಪಶ್ಚಿಮ ಘಟ್ಟದ ಕಡಿದಾದ ಗುಡ್ಡಗಳಲ್ಲಿ ಗಿರಿಜನರ ವಾಸಸ್ಥಾನ, ಸಣ್ಣ ಸಣ್ಣ ಗ್ರಾಮಗಳು, ಕಡಿದಾದ ರಸ್ತೆಗಳು, ನೈಸರ್ಗಿಕ ಅಡೆತಡೆಗಳು, ಮೂಲ ಸೌಕರ್ಯಗಳ ಕೊರತೆ, ಗ್ರಾಮಗಳ ನಡುವಿನ ದೂರ, ತುರ್ತು ಆರೋಗ್ಯ ಸೇವೆಗೆ ಅನುಕೂಲವಾಗುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಕೊರತೆ ಸೇರಿದಂತೆ ಹಲವು ಭೌಗೋಳಿಕ ಲಕ್ಷಣಗಳು ಜಿಲ್ಲೆಯನ್ನು ಗುಡ್ಡಗಾಡು ಜಿಲ್ಲೆ ಎಂದು ಘೋಷಿಸಲು ಪೂರಕವಾಗಿವೆ ಎಂದರು.ಜಿಲ್ಲೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸೌಲಭ್ಯವಿಲ್ಲದ ಪ್ರದೇಶಗಳು ಹೆಚ್ಚಿದ್ದು, ದೇಶದಲ್ಲಿ ಈಗಾಗಲೇ ಗುಡ್ಡಗಾಡು ಜಿಲ್ಲೆಗಳೆಂದು ಘೋಷಿಸಲ್ಪಟ್ಟ ತಮಿಳುನಾಡಿನ ನೀಲಗಿರಿ, ಅಸ್ಸಾಂನ ದಿಮಾ ಹಸಾವೋ ಹಾಗೂ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಗಳ ಮಾದರಿಯಲ್ಲಿ ಉತ್ತರ ಕನ್ನಡಕ್ಕೂ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.