ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನದ ಕ್ಷೇತ್ರವನ್ನು ಹದ್ದಬಸ್ತ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ತಾಲೂಕಿನ ಐರಣಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆ ವತಿಯಿಂದ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಅವರಿ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನದ ಕ್ಷೇತ್ರವನ್ನು ಹದ್ದಬಸ್ತ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ತಾಲೂಕಿನ ಐರಣಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆ ವತಿಯಿಂದ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಅವರಿ ಮನವಿ ಸಲ್ಲಿಸಿದರು.
ಶ್ರೀ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಮರಡೆಪ್ಪ ಚಳಗೇರಿ ಮಾತನಾಡಿ, ನಮ್ಮ ಗ್ರಾಮಕ್ಕೆ ಸ್ಮಶಾನಕ್ಕೆ ಎಂದು ರಿ.ಸ.ನಂ. 365. ಕ್ಷೇತ್ರ 1ಎಕರೆ, ರಿ.ಸ.ನಂ. 366/ಬಿ, ಕ್ಷೇತ್ರ 2 ಎಕರೆ, ರಿ.ಸ.ನಂ. 378. ಕ್ಷೇತ್ರ 4 ಎಕರೆ, ರಿ.ಸ.ನಂ. 377, ಕ್ಷೇತ್ರ 5 ಎಕರೆ ಸೇರಿದಂತೆ ಒಟ್ಟು 8 ಎಕರೆ ಜಮೀನು ಸ್ಮಶಾನಕ್ಕೆ ಎಂದು ಇರುತ್ತದೆ. ಆದರೆ ಇಷ್ಟೊಂದು ಕ್ಷೇತ್ರದ ಜಮೀನುಗಳು ನಮ್ಮ ಊರಿನ ಸ್ಮಶಾನಕ್ಕೆ ಎಂದು ಇದ್ದರೂ ಊರಲ್ಲಿ ಯಾರಾದರು ತೀರಿಕೊಂಡರೆ ಅವರ ಶವಸಂಸ್ಕಾರವನ್ನು ಮಾಡಲು ನಮಗೆ ಸ್ಮಶಾನದ ಜಾಗವೇ ಕಾಣದಂತಾಗಿದೆ. ಏಕೆಂದರೆ ನಮ್ಮ ಊರಿನ ಕೆಲವರು ಈ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡು ಬೆಳೆಗಳನ್ನು ಬೆಳೆದುಕೊಂಡು ಪಂಚಾಯಿತಿಗೆ ಮತ್ತು ಊರಿನ ಸಾರ್ವಜನಿಕರಿಗೆ ವಂಚನೆ ಮಾಡಿರುತ್ತಾರೆ. ಈಗ ನಮ್ಮ ಊರಲ್ಲಿ ಯಾರಾದರೂ ತೀರಿಕೊಂಡರೆ ಅವರನ್ನು ನಮ್ಮ ಊರಿಗೆ ಹೊಂದಿಕೊಂಡಿರುವ ತುಂಗಭದ್ರ ನದಿಯ ದಂಡೆಯಲ್ಲಿ ಶವ ಸಂಸ್ಕಾರ ಮಾಡಬೇಕು. ಇಲ್ಲವಾದರೆ ಹೊಳೆ ರಭಸವಾಗಿ ಹರಿಯುತ್ತಿದ್ದರೆ ಆ ಶವವನ್ನು ಹೊಳೆಗೆ ಹಾಕಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. 8 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಒಂದು ಸ್ಮಶಾನ ಇಲ್ಲವೆಂಬುದು ನಾಚಿಕೆ ಪಡುವ ಸಂಗತಿಯಾಗಿದೆ. ಆದ್ದರಿಂದ ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸ್ಮಶಾನದ ಜಾಗವನ್ನು ಅತಿಕ್ರಮಣ ಮಾಡಿಕೊಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರು ಒತ್ತುವರಿ ಮಾಡಿಕೊಂಡ ಸ್ಮಶಾನದ ಕ್ಷೇತ್ರವನ್ನು ಬಿಡಿಸಿಕೊಡಬೇಕು. ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗವನ್ನು ಹದಬಸ್ತ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಐರಣಿ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗ್ರೇಡ್-1 ತಹಸೀಲ್ದಾರರಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ನಮ್ಮ ಊರಿನ ಸ್ಮಶಾನದ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಇಲ್ಲದ್ದಿದ್ದರೆ ಗ್ರಾಮದಲ್ಲಿ ಯಾರೇ ಮರಣ ಹೊಂದಿದರು ತಮ್ಮ ಕಚೇರಿಯ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ದಿಳ್ಳೆಪ್ಪ ಸತ್ಯಪ್ಪನವರ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರಮೇಶ ಕಟನಳ್ಳಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.