)
ಕುಷ್ಟಗಿ: ತಾಲೂಕಿನ ಕೂಡ್ಲೂರು ಗ್ರಾಮದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುತ್ತಿದ್ದ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಸುಟ್ಟು ಎರಡು ತಿಂಗಳು ಕಳೆದರೂ ಜೆಸ್ಕಾಂ ಇಲಾಖೆ ಹೊಸ ಪರಿವರ್ತಕ ಅಳವಡಿಸದ ಹಿನ್ನೆಲೆ ಆಕ್ರೋಶಗೊಂಡ ರೈತರು ಕುಷ್ಟಗಿ ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಳೆ ಕೊರತೆಯ ನಡುವೆ ನೀರಾವರಿ ಅವಲಂಬಿಸಿ ಬೆಳೆ ಬೆಳೆಸಿದ್ದೇವೆ. ಆದರೆ ಪರಿವರ್ತಕ ಸುಟ್ಟ ನಂತರ ಎರಡು ತಿಂಗಳು ಕಳೆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ. ಬೆಳೆಗಳು ಒಣಗುವ ಹಂತ ತಲುಪಿದ್ದು, ಅಪಾರ ಆರ್ಥಿಕ ನಷ್ಟ ಎದುರಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಸ್ಕಾಂ ಎಇಇ ಕೆಂಚಪ್ಪ ರೈತರ ಮನವಿ ಸ್ವೀಕರಿಸಿ ಈಗಾಗಲೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.ಅಧಿಕಾರಿಗಳ ಭರವಸೆಯ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ದೊಡ್ಡನಗೌಡ ದಳಪತಿ, ರಮೇಶ ಸೋಲಾಪೂರ, ಶರಣಗೌಡ ಕರಡಕಲ್, ಅಮರೇಶ, ಹುಸೇನಪ್ಪ ಮುದೇನೂರು ಸೇರಿದಂತೆ ಕೂಡ್ಲೂರು ಗ್ರಾಮದ ರೈತರು ಅನೇಕರು ಇದ್ದರು.