ಕಾರಟಗಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಸಾಂಪ್ರದಾಯಿಕ ನಾಟಿ ಪದ್ಧತಿ ಬಿಟ್ಪು ಪರ್ಯಾಯವಾಗಿ ಡಿಎಸ್ಆರ್ (ಡೈರೆಕ್ಟ್ ಸೀಡೆಡ್ ರೈಸ್) ಪದ್ಧತಿ ಅಳವಡಿಸಿಕೊಂಡರೆ ಮಿತ ನೀರಿನ ಬಳಕೆಯ ಜತೆಗೆ ಕೃಷಿ ವೆಚ್ಚ ಕಡಿಮೆ ಮಾಡಬಹುದು ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ಪ್ರಾಧ್ಯಾಪಕ ಬಾಬುರಾವ್ ದೀಕ್ಷಿತ್ ಸಲಹೆ ನೀಡಿದರು.
ಗದ್ದೆಯಲ್ಲಿ ನೀರು ನಿಲ್ಲಿಸದ ಕಾರಣ ಕಂದು ಜಿಗಿ ಹುಳು, ಬೇರು ಕೊಳೆ ಹಾಗೂ ಕಾಂಡ ಕೊರಕದಂತಹ ಕೀಟ-ರೋಗಗಳ ಪ್ರಮಾಣವೂ ಕಡಿಮೆಯಾಗುತ್ತದೆ. ಆರ್‌ಎನ್‌ಆರ್, ಸೋನಾ ಮಸೂರಿ ಸೇರಿದಂತೆ ವಿವಿಧ ಭತ್ತದ ತಳಿ ಈ ಪದ್ಧತಿಯಲ್ಲಿ ಯಶಸ್ವಿಯಾಗಿ ಬೆಳೆಯಬಹುದು ಎಂದು ವಿವರಿಸಿದರು.
ವಾಲ್ಮಿ ಸಹಾಯಕ ಪ್ರಾಧ್ಯಾಪಕ ಯಲ್ಲಪ್ಪ ಪೂಜಾರಿ ತುಂಗಭದ್ರ ಎಡದಂಡೆ ನಾಲೆ ನೀರಾವರಿ ಪ್ರದೇಶದಲ್ಲಿ ಎಲ್ಲರಿಗೂ ನೀರು ತಲುಪಲು ವಾರಾಬಂದಿ ಪದ್ಧತಿ ಜಾರಿ ಕುರಿತು ಹಾಗೂ ನೀರಾವರಿ ಕಾಯ್ದೆ ಕುರಿತು ಮಾಹಿತಿ ನೀಡಿದರೆ, ಫಕ್ಕೀರೇಶ ಅಗಡಿ ನೀರು ಬಳಕೆದಾರರ ಸಂಘಗಳ ಆಡಳಿತ ನಿರ್ವಹಣೆ ಮತ್ತು ಇಂದುಧರ ಹಿರೇಮಠ ಮಣ್ಣಿನ ಆರೋಗ್ಯ ಬೆಳೆ ನಿರ್ವಹಣೆ ದ್ವಿದಳ ಧಾನ್ಯ ಬೆಳೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕೆಎನ್‌ಎನ್‌ಎಲ್ ಅಧಿಕಾರಿಗಳು, ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.