ರಾಣಿಬೆನ್ನೂರು: ಇಂದಿನ ಮಾಯಾಲೋಕದಲ್ಲಿ ನಾನು ಯಾರು, ಶಕ್ತಿ ಏನು ಎನ್ನುವುದನ್ನು ಮನುಷ್ಯ ಮರೆತಿದ್ದಾನೆ. ಮನುಷ್ಯರು ತಮ್ಮಲ್ಲಿರುವ ಅಪಾರವಾದ ಶಕ್ತಿಯನ್ನು ಅಪವ್ಯಯ ಮಾಡುತ್ತಿದ್ದಾರೆ. ಈ ಎಲ್ಲದರಿಂದ ಹೊರಬಂದು ತನ್ನನ್ನು ಅರಿಯಲು ಪಂಚಾಕ್ಷರಿ ಮಂತ್ರದಿಂದ ಸಾಧ್ಯವಿದೆ ಎಂದು ದಾವಣಗೆರೆ ಜಡೆಸಿದ್ದೇಶ್ವರ ಆಶ್ರಮದ ಶಿವಾನಂದ ಮಹಾಸ್ವಾಮಿಗಳು ನುಡಿದರು.
ನಮಗೆ ಯಜ್ಞ, ಯಾಗ ತಪಸ್ಸುಗಳನ್ನ ಮಾಡಿ ಪುಣ್ಯ ಸಂಪಾದನೆ ಮಾಡಲು ಸಾಧ್ಯವಾಗದು. ಹೀಗಾಗಿ 7 ಕೋಟಿ ಮಂತ್ರ ಜಪಿಸಿದಷ್ಟು ಶಕ್ತಿಯುಳ್ಳ ಓಂ ನಮಃ ಶಿವಾಯ ಎನ್ನುವ ಸಪ್ತಾಕ್ಷರ ಮಂತ್ರವನ್ನು ಕೊಟ್ಟಿದ್ದಾರೆ. ಈ ಮಂತ್ರ ಜಪಿಸಲು ಎಲ್ಲಿಗೂ ಹೋಗಬೇಕಾಗಿಲ್ಲ. ನಿಮ್ಮ ದೈನಂದಿನ ಕಾರ್ಯಗಳ ಜೊತೆಗೆ ಜಪಿಸಿದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂದರು.
ಜೋಡಕುರುಳಿ ಸಿದ್ಧಾರೂಢ ಮಠದ ಚಿದ್ಘನಾನಂದ ಶ್ರೀಗಳು ಮಾತನಾಡಿ, ಈ ಮಂತ್ರ ಜಪಿಸಲು ಜಾತಿ ಧರ್ಮದ ಭೇದವಿಲ್ಲ, ಕಾರಣ ಸಿದ್ಧಾರೂಢರ ಅಣತಿಯಂತೆ ಮುಪ್ಪಿನಾರ್ಯರು, ಎಲ್ಲರನ್ನ ಜೊತೆಗಿಟ್ಟುಕೊಂಡು ಮಠ ಕಟ್ಟಿದರು. ಅದು ಇಂದು ಬೃಹತ್ತಾಗಿ ಬೆಳೆದಿದೆ. ಸಿದ್ಧಾರೂಢರ ಪ್ರತಿರೂಪವೇ ಮುಪ್ಪಿನಾರ್ಯರು. ಮುಪ್ಪಿನಾರ್ಯರ ಪ್ರತಿರೂಪವೆ ಬಸವರಾಜ ಶ್ರೀಗಳು, ಮುಪ್ಪಿನಾರ್ಯರಂತೆ ಬಸವರಾಜ ಶ್ರೀಗಳು ಎಲ್ಲರನ್ನು ಜೊತೆಗಿಟ್ಟುಕೊಂಡು ಮಠವನ್ನು ಬೆಳೆಸುತ್ತಿದ್ದಾರೆ ಎಂದರು.ಉತ್ತರಾಧಿಕಾರಿ ಸಿದ್ಧಾರೂಢ ಭಾರತಿ ಶ್ರೀಗಳು, ಬಸವರಾಜ ಶ್ರೀಗಳು, ಹದಡಿ ಮುರಳಿಧರ ಶ್ರೀಗಳು, ತೆಲಗಿ ಪೂರ್ಣಾನಂದ ಶ್ರೀಗಳು, ಬೀದರ ಪ್ರಭುಲಿಂಗ ಶ್ರೀಗಳು ಹಾಗೂ ಕಡೂರಿನ ಚೆನ್ನಬಸವ ಶ್ರೀಗಳು, ಹರಿಹರದ ವಿವೇಕಾನಂದ ಶ್ರೀಗಳು, ವಿಧಾನಸಭಾ ಹಂಗಾಮಿ ಅಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ, ಟ್ರಸ್ಟ್ ಸದಸ್ಯ ಸಿದ್ದನಗೌಡ ಪಾಟೀಲ, ಧರ್ಮದರ್ಶಿ ಬಾಬು ಶೆಟ್ಟರ ಮತ್ತಿತರರಿದ್ದರು. ನಂತರ ಜನಸ್ತೋಮದ ಮಧ್ಯೆ ಬಸವರಾಜ ಶ್ರೀಗಳ ರಥೋತ್ಸವ ಜರುಗಿತು.
ಸುವರ್ಣಮಹೋತ್ಸವ: ಹೊಳೆಮಠದ ಪೀಠದ ಅಧಿಕಾರವಹಿಸಿಕೊಂಡ 50 ಪೂರೈಸಿದ ಹಿನ್ನೆಲೆಯಲ್ಲಿ ಮಠದ ಬಸವರಾಜ ಶ್ರೀಗಳ ಸುವರ್ಣ ಮಹೋತ್ಸವವನ್ನ ಬರುವ ಫೆಬ್ರವರಿ ತಿಂಗಳಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಪೂರ್ವಭಾವಿ ಸಭೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದು ಧರ್ಮದರ್ಶಿ ಬಾಬಣ್ಣ ಶೆಟ್ಟರ ತಿಳಿಸಿದರು.