ಭೋವಿ ಜಾತಿಯವರಲ್ಲದವರಿಗೆ ಪ್ರಮಾಣಪತ್ರ ನೀಡದಿರಲು ಆಗ್ರಹ

KannadaprabhaNewsNetwork |  
Published : Oct 14, 2026, 02:00 AM IST
ಫೋಟೋ: 13kst1ಕುಷ್ಟಗಿ ತಾಲೂಕು ಭೋವಿ–ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು, ಅರ್ಹ ಭೋವಿ–ವಡ್ಡರ ಸಮುದಾಯದವರಿಗೆ ಮಾತ್ರ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಜಾತಿ ಪ್ರಮಾಣಪತ್ರ ವಿತರಿಸುವ ಸಂದರ್ಭದಲ್ಲಿ ಅರ್ಜಿದಾರರ ಪೂರ್ವಜರ ದಾಖಲೆಗಳು, ಸಾಮಾಜಿಕ ಸ್ಥಿತಿಗತಿ, ಸಾಂಪ್ರದಾಯಿಕ ವೃತ್ತಿ, ಭಾಷೆ, ವಿವಾಹ ಪದ್ಧತಿ, ಆಚಾರ–ವಿಚಾರ ಹಾಗೂ ಅಂತ್ಯಸಂಸ್ಕಾರದ ಸಂಪ್ರದಾಯಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು.

ಕುಷ್ಟಗಿ: ನೈಜ ಭೋವಿ–ವಡ್ಡರ ಸಮುದಾಯದ ಅರ್ಹರಿಗೆ ಮಾತ್ರ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು. ಭೋವಿ ಜಾತಿಗೆ ಸೇರದವರಿಗೆ ಈ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ನೀಡಬಾರದು ಎಂದು ಒತ್ತಾಯಿಸಿ ಕುಷ್ಟಗಿ ತಾಲೂಕು ಭೋವಿ–ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಮುಖಂಡರು, ಕೇಂದ್ರ ಸರ್ಕಾರದ 1977 ಮತ್ತು 1979ರ ಅಧಿಸೂಚನೆಗಳು ಹಾಗೂ ರಾಜ್ಯ ಸರ್ಕಾರದ 1980 ಮತ್ತು 2015ರ ಆದೇಶಗಳ ಪ್ರಕಾರ ಭೋವಿ ಜಾತಿಯ ಸಮಾನಾರ್ಥಕ ಹಾಗೂ ಪರ್ಯಾಯ ಹೆಸರುಗಳಾದ ಓಡ್, ಒಡ್ಡೆ, ಒಡ್ಡರ, ವಡ್ಡರ, ಕಲ್ಲು ವಡ್ಡರ, ಮಣ್ಣು ವಡ್ಡರ ಸೇರಿದಂತೆ ಅರ್ಹ ಸಮುದಾಯದವರಿಗೆ ಮಾತ್ರ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಜಾತಿ ಪ್ರಮಾಣಪತ್ರ ವಿತರಿಸುವ ಸಂದರ್ಭದಲ್ಲಿ ಅರ್ಜಿದಾರರ ಪೂರ್ವಜರ ದಾಖಲೆಗಳು, ಸಾಮಾಜಿಕ ಸ್ಥಿತಿಗತಿ, ಸಾಂಪ್ರದಾಯಿಕ ವೃತ್ತಿ, ಭಾಷೆ, ವಿವಾಹ ಪದ್ಧತಿ, ಆಚಾರ–ವಿಚಾರ ಹಾಗೂ ಅಂತ್ಯಸಂಸ್ಕಾರದ ಸಂಪ್ರದಾಯಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಸ್ಥಳೀಯ ಸಮಾಜದ ಮುಖಂಡರಿಂದಲೂ ಮಾಹಿತಿ ಪಡೆದು ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಭೋವಿ ಜಾತಿಗೆ ಸೇರದ ಕೆಲವರು ಈ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಭೋವಿ ಸಮಾಜದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಪರಸಪ್ಪ ಅಮರಾವತಿ, ಸೂಚಪ್ಪ ದೇವರಮನಿ, ಗೋವಿಂದ ವಡ್ಡರ್, ತಿಮ್ಮಣ್ಣ ಹಿರೇಮನಿ, ಹನುಮಂತಪ್ಪ ಗಡಾದ್, ಹನುಮೇಶ ಭೋವಿ, ನಾಗರಾಜ ಭೋವಿ, ಶರಣಪ್ಪ ಬಿಜಕಲ್, ಈಶಪ್ಪ ಭೋವಿ, ಶಂಕ್ರಪ್ಪ ವಡ್ಡರ, ಭೀಮಣ್ಣ ಮ್ಯಾಗೇರಿ, ಗುಡದಪ್ಪ ಹಂಚಿನಾಳ ಸೇರಿದಂತೆ ಸಮಾಜದ ಹಿರಿಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಯಾಚನೆ ವೇಳೆ ಸಂಕನೂರ ಪರ ಎಲ್ಲೆಡೆ ಉತ್ತಮ ಸ್ಪಂದನೆ
ವಿವಾಹಿತೆ ಸಾವು: ಪತಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು