ಕೆಆರ್‌ಎಸ್ ಸುತ್ತ ಗಣಿಗಾರಿಕೆ ನಿಷೇಧಕ್ಕೆ ಜಿಲ್ಲಾಡಳಿತಕ್ಕೆ ಆಗ್ರಹ

KannadaprabhaNewsNetwork | Published : Feb 17, 2024 1:16 AM

ಸಾರಾಂಶ

ಕೆ.ಆರ್.ಎಸ್. ಅಣೆಕಟ್ಟೆ ಕಾವೇರಿ ಕೊಳ್ಳದ ರೈತರ ಜೀವನಾಧಾರ, ಕನ್ನಂಬಾಡಿ ಸುತ್ತ ಮುತ್ತ ಎಗ್ಗಿಲ್ಲದೆ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ಕಡಿವಾಣ ಹಾಕಿ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಆದರೆ, ಗಣಿ ಮಾಲೀಕರ ಒತ್ತಡಕ್ಕೆ ಮಣಿದೋ.., ಇಲ್ಲ ಇನ್ನಾವುದೋ ಕಾರಣಕ್ಕಾಗಿ ಮತ್ತೆ ಟ್ರಯಲ್ ಬ್ಲಾಸ್ಟ್ ನಡೆಸಿ ಮತ್ತೊಮ್ಮೆ ಗಣಿಗಾರಿಕೆಗೆ ಕುಮ್ಮಕ್ಕು ನೀಡುತಿತರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನಡೆಯನ್ನು ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಅಣೆಕಟ್ಟೆ ಸುತ್ತ ಮುತ್ತ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಹಾಗೂ ನ್ಯಾಯಾಲಯದ ಆದೇಶದಂತೆ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿ ಚಟುವಟಿಕೆ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಬಿಜೆಪಿ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅವರಿಗೆ ಮನವಿ ಸಲ್ಲಿಸಿ, ಕೆ.ಆರ್.ಎಸ್. ಅಣೆಕಟ್ಟೆ ಕಾವೇರಿ ಕೊಳ್ಳದ ರೈತರ ಜೀವನಾಧಾರ, ಕನ್ನಂಬಾಡಿ ಸುತ್ತ ಮುತ್ತ ಎಗ್ಗಿಲ್ಲದೆ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ಕಡಿವಾಣ ಹಾಕಿ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಆದರೆ, ಗಣಿ ಮಾಲೀಕರ ಒತ್ತಡಕ್ಕೆ ಮಣಿದೋ.., ಇಲ್ಲ ಇನ್ನಾವುದೋ ಕಾರಣಕ್ಕಾಗಿ ಮತ್ತೆ ಟ್ರಯಲ್ ಬ್ಲಾಸ್ಟ್ ನಡೆಸಿ ಮತ್ತೊಮ್ಮೆ ಗಣಿಗಾರಿಕೆಗೆ ಕುಮ್ಮಕ್ಕು ನೀಡುತಿತರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನಡೆಯನ್ನು ಖಂಡಿಸಿದ್ದಾರೆ.

ಇಂತಹ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಡಳಿತ ಅನುಮತಿ ನೀಡಬಾರದು ಹಾಗೂ ಅಣೆಕಟ್ಟೆ ಸುರಕ್ಷತಾ ಕಾಯಿದೆ ೨೦೨೧ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಡಿಸ್ಟ್ರಿಕ್ ಮಿನರಲ್ ಫಂಡ್‌ನಿಂದ ಕಲ್ಲು ಗಣಿಯಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರ ಪುನರ್ವಸತಿ ಕಲ್ಪಿಸಬೇಕು. ಕೂಲಿ ಕಾರ್ಮಿಕರ ಜೀವನೋಪಾಯಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಗುಣಿಗಾರಿಕೆಗಳಿಗೆ ಪೂರೈಸಲಾಗುತ್ತಿರುವ ವಿದ್ಯುತ್‌ನ್ನು ಕೂಡಲೇ ಕಟಾವು ಮಾಡಿದರೆ ಗಣಿ ಚಟುವಟಿಕೆಗಳಿಗೆ ಅವಕಾಶವೇ ಇರುವುದಿಲ್ಲ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ನಿಗಧಿತ ಸಮಯದೊಳಗೆ ಸಕ್ರಮ ಸೇರಿದಂತೆ ಅಕ್ರಮವಾಗಿ ಅಳವಡಿಸಿರುವ ಗಣಿ ಯಂತ್ರೋಪಕರಣಗಳನ್ನು ೨೦ ಕಿ.ಮೀ. ವ್ಯಾಪ್ತಿಯಿಂದ ತೆರವುಗೊಳಿಸಲು ಗಣಿ ಮಾಲೀಕರಿಗೆ ಸೂಚನೆ ನೀಡುವಂತೆ ಒತ್ತಾಯಿಸಿದರು.

ಈಗಾಗಲೇ ಗಣಿಗಾರಿಕೆಯಿಂದ ದೊಡ್ಡ ಕೊಳಗಂತಿರುವ ಕಲ್ಲು ಕ್ವಾರೆಗಳಿಗೆ ಕೂಡಲೇ ನೀರು ತುಂಬಿಸಬೇಕು. ಇದರಿಂದ ಅಕ್ರಮ ಗಣಿಗಾರಿಕೆಗೂ ಕಡಿವಾಣ ಹಾಕಿದಂತಾಗುತ್ತದೆ. ಜಲ ಸಂರಕ್ಷಣೆಯು ಆಗುತ್ತದೆ. ಸಿಡಬ್ಲ್ಯೂಸಿ ಮಾಹಿತಿಯಂತೆ ನಮ್ಮ ದೇಶದಲ್ಲಿ ೫೭೪೫ ಭಾರೀ ಅಣೆಕಟ್ಟೆಗಳಿವೆ. ಅವುಗಳಲ್ಲಿ ನೂರು ವರ್ಷ ಮೀರಿರುವ ಸುಮಾರು ೪೦೦ ಅಣೆಕಟ್ಟೆಗಳಿವೆ. ಅವುಗಳ ಸುರಕ್ಷತೆ ವಹಿಸಬೇಕಾದದ್ದು ಆಯಾ ರಾಜ್ಯಗಳ ಕರ್ತವ್ಯವಾಗಿದೆ ಎಂದರು.

ಒಂದು ವೇಳೆ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ಮುಂದಾದಲ್ಲಿ ಗೋಬ್ಯಾಕ್ ಚಳವಳಿ ಹಮ್ಮಿಕೊಂಡು ರೈತರೊಟ್ಟಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡರಾದ ವಿವೇಕ, ಶಿವಲಿಂಗಯ್ಯ, ಮಹಂತಪ್ಪ, ಶಿವಕುಮಾರ್, ಸಿ.ಟಿ.ಮಂಜುನಾಥ್, ಪ್ರಸನ್ನಕುಮಾರ್, ಶಂಕರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Share this article