ಡಂಬಳದಲ್ಲಿ ಕೆರೆ ಕಾಲುವೆ ಹೂಳೆತ್ತಲು ಆಗ್ರಹ

KannadaprabhaNewsNetwork |  
Published : May 04, 2026, 02:30 AM IST
ಪೋಟೊ ಕ್ಯಾಪ್ಸನ್: ಡಂಬಳ ಗ್ರಾಮದ ಕಾಲುವೆಗಳು ಸಂಪೂರ್ಣ ಹೂಳು ತುಂಬಿದ್ದು ಸ್ವಚ್ಚಗೊಳಿಸಬೇಕೆಂದು ಉಪತಹಶೀಲ್ದಾರ ಕಛೇರಿಗೆ ಮನವಿ ಸಲ್ಲಿಸಿದ ಡಂಬಳ ಗ್ರಾಮದ ರೈತರು. | Kannada Prabha

ಸಾರಾಂಶ

ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಲಭ್ಯವಿದ್ದರೂ ಕಾಲುವೆಗಳಲ್ಲಿ ಮುಳ್ಳು, ಕಂಟಿ ಹಾಗೂ ಹೂಳು ತುಂಬಿಕೊಂಡಿರುವ ಕಾರಣ ನೀರು ಮುಂದೆ ಸಾಗದಂಥ ಸ್ಥಿತಿ ನಿರ್ಮಾಣವಾಗಿದೆ.

ಡಂಬಳ: ಗ್ರಾಮದ ಚಿಕ್ಕ ನೀರಾವರಿ ಇಲಾಖೆಯ ವ್ಯಾಪ್ತಿಯ ಕೆರೆ ನೀರಾವರಿ ಕಾಲುವೆಗಳ ದಕ್ಷಿಣ ಹಾಗೂ ಪೂರ್ವ ಭಾಗಗಳು ಸಂಪೂರ್ಣವಾಗಿ ಹೂಳು ತುಂಬಿಕೊಂಡಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕಾಲುವೆಗಳನ್ನು ಸ್ವಚ್ಛಗೊಳಿಸುವಂತೆ ರೈತರು ಡಂಬಳ ಗ್ರಾಮದ ಉಪತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.

ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಲಭ್ಯವಿದ್ದರೂ ಕಾಲುವೆಗಳಲ್ಲಿ ಮುಳ್ಳು, ಕಂಟಿ ಹಾಗೂ ಹೂಳು ತುಂಬಿಕೊಂಡಿರುವ ಕಾರಣ ನೀರು ಮುಂದೆ ಸಾಗದಂಥ ಸ್ಥಿತಿ ನಿರ್ಮಾಣವಾಗಿದೆ. ಈ ಕಾಲುವೆಗಳ ಮೂಲಕ ಸುಮಾರು ಎರಡು ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯವಿದ್ದು, ಅನೇಕ ರೈತ ಕುಟುಂಬಗಳು ಇದನ್ನೇ ಅವಲಂಬಿಸಿ ಜೀವನ ನಡೆಸುತ್ತಿವೆ. ಆದರೆ, ಕಾಲುವೆಗಳ ದುಸ್ಥಿತಿಯಿಂದ ಬೆಳೆಗಳಿಗೆ ನೀರು ತಲುಪದೇ ರೈತರು ಆರ್ಥಿಕ ಹಿನ್ನಡೆಯ ಭೀತಿ ಎದುರಿಸುತ್ತಿದ್ದಾರೆ.

ಈ ಹಿನ್ನೆಲೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಲುವೆಗಳನ್ನು ತಕ್ಷಣವೇ ಸ್ವಚ್ಛಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕಾಲುವೆಗಳಲ್ಲಿ ಸಂಪೂರ್ಣ ಹೂಳು ತುಂಬಿರುವುದರಿಂದ ತುರ್ತು ಕ್ರಮ ಅಗತ್ಯವಿದೆ ಎಂದು ರೈತರು ಒತ್ತಾಯಿಸಿದರು.

ಮನವಿಗೆ ಸ್ಪಂದಿಸಿ ಎಂಟು ದಿನಗಳೊಳಗೆ ಸ್ವಚ್ಛತಾ ಕಾರ್ಯ ಆರಂಭಿಸದಿದ್ದರೆ ಸಂಬಂಧಿಸಿದ ಇಲಾಖೆಯ ಕಚೇರಿ ಮುಂದೆ ಬೃಹತ್ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ರೈತರು ಎಚ್ಚರಿಕೆ ನೀಡಿದರು.

ರೈತ ಬುಡ್ನೆಸಾಬ ಅತ್ತಾರ ಮನವಿ ಓದಿ, ಕಂದಾಯ ಇಲಾಖೆಯ ಅಧಿಕಾರಿ ಎಂ.ಎಂ. ವಿಭೂತೆ ಅವರಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿ, ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಮಪ್ಪ ಯಂಡಿಗೇರಿ, ಮಲ್ಲಪ್ಪ ಗಡಗಿ, ಶಿವಪ್ಪ ಬಂಡಿ, ರಾಜಪ್ಪ ಪಟ್ಟಣಶೆಟ್ಟಿ, ರಾಜಶೇಖರ ಪಟ್ಟಣಶೆಟ್ಟಿ, ಎಸ್.ಆರ್. ಪಲ್ಲೇದ, ಹುಸೇನಸಾಬ ಕಾಸ್ತಾರ, ಮಂಜುನಾಥ ಕೆರಿ, ಜಾಕೀರ ಮೂಲಿಮನಿ, ಎಂ.ಎನ್. ಕೋರ್ಲಹಳ್ಳಿ, ಎಂ.ಎಸ್. ಪಲ್ಲೇದ, ವಿ.ವೈ. ರಾಘಣ್ಣವರ, ಎಚ್.ವೈ. ಗಡಗಿ, ಬಸವರಾಜ ಪಟ್ಟಣಶೆಟ್ಟಿ, ಅಶೋಕ ಚಿಕರಡ್ಡಿ, ಮಂಜುನಾಥ ಕರದಾನಿ, ಪರಮೇಶ ಓಲೇಕಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಅನಿರೀಕ್ಷಿತವಾಗಿ ಬಂದ ಅಭ್ಯರ್ಥಿ ನಾನು: ಶ್ರೀನಿವಾಸ ಮಾನೆ
ಹದಿಹರೆಯರಿಗೆ ಮಾರ್ಗದರ್ಶನ ಅಗತ್ಯ: ಶಂಕರ ಹಲಗತ್ತಿ