ಕನ್ನಡಪ್ರಭವಾರ್ತೆ ಚಿತ್ರದುರ್ಗ
ರಾಜ್ಯದ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜುಗಳ ಶೈಕ್ಷಣಿಕ ಹಾಗೂ ಮೂಲಭೂತ ಸೌಕರ್ಯ ಕೊರತೆ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ಮಾಡಿದರು. ರಾಜ್ಯದಲ್ಲಿನ ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಮರ್ಪಕ ಬೋಧಕ ವರ್ಗವಿಲ್ಲದೆ ವಿದ್ಯಾರ್ಥಿಗಳ ಪಾಲಿಗೆ ಮೌಲ್ಯಯುತ ಶಿಕ್ಷಣವೆಂಬುದು ಮಸುಕಾಗಿದೆ. ಈ ಬಗ್ಗೆ ಹಲವಾರು ಬಾರಿ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 460ಕ್ಕೂ ಹೆಚ್ಚಿನ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರ ಕೊರತೆ ಇದೆ. ಪರಿಣಾಮ ವಿದ್ಯಾರ್ಥಿಗಳಿಗೆ ಸಮರ್ಪಕ ತರಗತಿ ನಡೆಯುತ್ತಿಲ್ಲ. ಕಳೆದ ಹಲವಾರು ವರ್ಷಗಳಿಂದ ಇರುವ ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾಕ ಖಾಯಂ ಉಪನ್ಯಾಸಕರ ಬದಲು ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿ ಕೈ ತೊಳೆದುಕೊಳ್ಳುತ್ತಿದೆ. ಇದಲ್ಲದೇ ಅತಿಥಿ ಉಪನ್ಯಾಸಕರ ನೇಮಕದಲ್ಲಿಯೂ ಕೂಡ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ ಕೂಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ತರಗತಿಗಳು ಶುರುವಾಗಿ 50 ದಿನಗಳು ಕಳೆದ ನಂತರ ಅತಿಥಿ ಉಪನ್ಯಾಸಕರ ಸರ್ಕಾರ ನೇಮಕ ಮಾಡಿದೆ. ಇದು ಉನ್ನತ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ. ರಾಜ್ಯದ ವಿದ್ಯಾರ್ಥಿಗಳ ಸಮಯ ಹಾಗೂ ತರಗತಿಗಳ ನಷ್ಟಕ್ಕೆ ಹೊಣೆಯಾರು? ಸರ್ಕಾರ ಇಂತಹ ವ್ಯವಸ್ಥೆ ಕೈ ಬಿಟ್ಟು ಖಾಯಂ ಉಪನ್ಯಾಸಕರ ನೇಮಕಾತಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಯುಯುಸಿಎಂಎಸ್ ತಂತ್ರಾಂಶದ ಬಳಕೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಮನ್ವಯ ಇಲ್ಲ. ಜತೆಗೆ ತಾಂತ್ರಿಕ ಪರಿಣಿತರ ಕೊರತೆಯಿಂದಾಗಿ ತಂತ್ರಾಂಶದ ಸುಲಭ ಬಳಕೆ ಅಸಾಧ್ಯವಾಗಿದೆ. ಅಧಿಕಾರಿಗಳು ಸಮಜಾಯಿಷಿ ನೀಡಿ ಹೊಣೆಗಾರಿಕೆಯಿಂದ ನುಣಚಿಕೊಳ್ಳದೆ ಜವಾಬ್ದಾರಿಯುತವಾಗಿ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕಿದೆ ಎಂದು ಒತ್ತಾಯಿಸಿದರು.ಪದವಿ ಹಾಗೂ ಸ್ನಾತಕೋತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವ ವಿಚಾರದ ಕುರಿತಾಗಿ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ಸ್ಪಷ್ಟ ನಿಲುವಿಗೆ ಬರಬೇಕು. ವಿದ್ಯಾರ್ಥಿಗಳಿಗೆ ಉಂಟಾಗುವ ಇನ್ನಿತರ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿನ ಸರ್ವಾಂಗೀಣ ಅಭಿವೃದ್ಧಿಗೆ ತನ್ನ ಬದ್ಧತೆ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಸಾಂಪ್ರದಾಯಿಕ ಪದವಿ ನೀಡುವ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರ ಕೊರತೆ ಜತೆಗೆ, ಮೂಲಭೂತ ಸೌಕರ್ಯಗಳ ಸಮಸ್ಯೆ, ಪೀಠೋಪಕರಣಗಳ ಕೊರತೆ, ಪ್ರಾಯೋಗಿಕ ಉಪಕರಣಗಳ ಅಲಭ್ಯತೆ ಸೇರಿದಂತೆ ಸಾಲು ಸಾಲು ಸಮಸ್ಯೆಗಳು ಇವೆ. ಇಂತಹ ಗಂಭೀರ ಸಮಸ್ಯೆಗಳ ನಿವಾರಣೆಗೆ ಮೊದಲು ಯತ್ನಿಸಿ ಶೈಕ್ಷಣಿಕ ಉನ್ನತಿಗೆ ಶ್ರಮಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.ಎಬಿವಿಪಿ ವಿಭಾಗ ಸಹ ಸಂಚಾಲಕ ಗೋಪಿ, ನಗರ ಸಹ ಕಾರ್ಯದರ್ಶಿ ಸಂಜಯ್, ಅಧ್ಯಯನ ವೃತ್ತ ಪ್ರಮುಖ್ ರಾಜು ಹೊನ್ನಮರಡಿ, ಎಸ್‍ಎಫ್‍ಎಸ್ ಪ್ರಮುಖ್ ಮಧು, ಸಾಮಾಜಿಕ ಜಾಲತಾಣ ಪ್ರಮುಖ್ ಆದರ್ಶ್, ಕಾರ್ಯಕರ್ತರಾದ ಪ್ರೀತಮ್, ಮಣಿಕಂಠ, ಚರಣ, ಚಂದ್ರಕಲಾ, ಕಾರ್ತಿಕ್, ಚಿತ್ರಸ್ವಾಮಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.