ತೆಂಗು ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕಚೇರಿ ಸ್ಥಾಪಿಸಲು ಆಗ್ರಹ

KannadaprabhaNewsNetwork | Published : Jul 11, 2024 1:31 AM

ಸಾರಾಂಶ

ಜಿಲ್ಲೆಯ ಕರಾವಳಿ ಭಾಗದ ತಾಲೂಕುಗಳಲ್ಲಿ ಒಟ್ಟು ೭೦೫೨ ಹೆಕ್ಟೇರ್ ತೆಂಗು ಪ್ರದೇಶವಿದೆ. ಅಂದಾಜು ೩೨,೫೬೦ ಜನ ತೆಂಗು ಬೆಳೆಯುವ ರೈತರನ್ನು ಒಳಗೊಂಡಿದೆ.

ಹೊನ್ನಾವರ: ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕಚೇರಿಯನ್ನು ಮಂಜೂರಿ ಮಾಡಬೇಕು ಮತ್ತು ತೆಂಗು ಉತ್ಪನ್ನಗಳ ಸಂಸ್ಕರಣ ಘಟಕವನ್ನು ಹೊನ್ನಾವರದಲ್ಲಿ ಸ್ಥಾಪಿಸಬೇಕು ಎಂದು ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆಯ ವತಿಯಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಕರಾವಳಿ ಭಾಗದ ತಾಲೂಕುಗಳಲ್ಲಿ ಒಟ್ಟು ೭೦೫೨ ಹೆಕ್ಟೇರ್ ತೆಂಗು ಪ್ರದೇಶವಿದೆ. ಅಂದಾಜು ೩೨,೫೬೦ ಜನ ತೆಂಗು ಬೆಳೆಯುವ ರೈತರನ್ನು ಒಳಗೊಂಡಿದೆ. ಕರಾವಳಿ ಪ್ರದೇಶವು ವಿಪುಲ ತೆಂಗಿನ ಉತ್ಪನ್ನಗಳನ್ನು ಹೊಂದಿದೆ. ಬಹು ಚಿಕ್ಕ ಹಿಡುವಳಿ ಬಡರೈತರು ಈ ಬೆಳೆಯನ್ನೆ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಬೆಳೆಗೆ ತಗಲುವ ವಿವಿಧ ಕೀಟ ಬಾಧೆಗಳ ಹಾವಳಿಯ ತಿಳಿವಳಿಕೆಯಿಲ್ಲ. ಅಲ್ಲದೆ ತೆಂಗು ಕೇವಲ ಆಹಾರ ಪದಾರ್ಥ ಮಾತ್ರವಾಗಿರದೆ ತೆಂಗಿನ ಇನ್ನುಳಿದ ಉತ್ಪನ್ನಗಳ ಸರಿಯಾದ ಬಳಕೆಯ ಮಾಹಿತಿ ಮತ್ತು ಸೌಲಭ್ಯ ಸಿಕ್ಕಿಲ್ಲ. ತೆಂಗಿನ ಮರ ಹತ್ತಿಳಿಯುವ ಕಾರ್ಮಿಕರಿಗೆ ಸರ್ಕಾರದ ಯಾವ ಸೌಲಭ್ಯಗಳೂ ಈವರೆಗೂ ಸಿಕ್ಕಿಲ್ಲ. ಹೀಗಾಗಿ ಸಂಸದರಾಗಿರುವ ತಾವು ಕೃಷಿ ಮತ್ತು ರೈತರ ಕಲ್ಯಾಣ ಮಂತ್ರಾಲಯ, ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಕಚೇರಿಯನ್ನು ಹೊನ್ನಾವರದಲ್ಲಿ ಮಂಜೂರಿ ಮಾಡಬೇಕು ಮತ್ತು ತೆಂಗು ಉತ್ಪನ್ನಗಳ(ಸಂಸ್ಕರಣ ಘಟಕ) ಕೈಗಾರಿಕೆಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆಯ ಅಧ್ಯಕ್ಷ ಜಿ.ಎನ್. ಗೌಡ, ಕಾರ್ಯದರ್ಶಿ ಪ್ರಭು ಮಾಸ್ತಿ ಪಟಗಾರ, ಗೌರವಾಧ್ಯಕ್ಷ ಜಿ.ಟಿ. ಪೈ, ಖಜಾಂಚಿ ಜಗದೀಶ ನಾಯ್ಕ, ಪದಾಧಿಕಾರಿಗಳಾದ ಶ್ರೀಪಾದ ನಾಯ್ಕ, ಎಂ.ಆರ್. ಹೆಗಡೆ, ಎಸ್.ಎನ್. ನಾಯಕ, ಎಸ್.ಕೆ. ಮೇಸ್ತ, ಡಾ. ಎಸ್.ಡಿ. ಹೆಗಡೆ, ಪೀಟರ್ ಮೆಂಡಿಸ್, ರಾಘು ನಾಯ್ಕ ಮನವಿ ಸಲ್ಲಿಸಿದರು.

Share this article