ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಪಟ್ಟಿಯಿಂದ ಕೊಳಗದಾಳು ಗ್ರಾಮವನ್ನು ಕೈಬಿಡುವಂತೆ ಒತ್ತಾಯಿಸಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಶಾಂತಿಯುತ ಜಾಥಾ ನಡೆಸಿ ಬೇಂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಅವರಿಗೆ ಆಕ್ಷೇಪಣೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ ಪಟ್ಟಿಯಿಂದ ಕೊಳಗದಾಳು ಗ್ರಾಮವನ್ನು ಕೈಬಿಡುವಂತೆ ಒತ್ತಾಯಿಸಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಶಾಂತಿಯುತ ಜಾಥಾ ನಡೆಸಿ ಬೇಂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಅವರಿಗೆ ಆಕ್ಷೇಪಣೆ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2026ರ ಜು.27ರಂದು ಪ್ರಕಟಿಸಿರುವ ಹೊಸ ಕರಡು ಅಧಿಸೂಚನೆಯಲ್ಲಿ ಕೊಡಗು ಜಿಲ್ಲೆಯ 55 ಗ್ರಾಮಗಳನ್ನು ಪರಿಸರ ಸೂಕ್ಷ್ಮವಲಯ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇವುಗಳಲ್ಲಿ ಕೊಳಗದಾಳು ಗ್ರಾಮವೂ ಸೇರಿದೆ. ಈ ಗ್ರಾಮದಲ್ಲಿ ಶತಮಾನಗಳಿಂದ ರೈತರು, ಕೃಷಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು ವಾಸಿಸುತ್ತಿದ್ದು, ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಶಾಲೆ, ಅಂಗನವಾಡಿ, ವಸತಿ ಪ್ರದೇಶ, ಸಾರ್ವಜನಿಕ ಸಮುದಾಯ ಭವನ, ರಸ್ತೆಗಳು, ಕುಡಿಯುವ ನೀರಿನ ಪೈಪ್‌ಲೈನ್‌ಗಳು ಹಾಗೂ ನೈಸರ್ಗಿಕ ನೀರಿನ ಟ್ಯಾಂಕ್‌ಗಳಿವೆ.ಈಗಾಗಲೇ ಅರಣ್ಯದ ಅಂಚಿನಲ್ಲಿರುವ ಕೊಳಗದಾಳು ಗ್ರಾಮದಲ್ಲಿ ನಿರಂತರವಾಗಿ ವನ್ಯಜೀವಿಗಳ ಹಾವಳಿ ಎದುರಾಗುತ್ತಿದ್ದು, ಕೃಷಿ ಬೆಳೆ ಹಾನಿ ಹಾಗೂ ಮಾನವ ಪ್ರಾಣ ಹಾನಿಯಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಗ್ರಾಮದ ಒಟ್ಟು ಭೂ ಪ್ರದೇಶದಲ್ಲಿ ಈಗಾಗಲೇ ಶೇ. 36ರಷ್ಟು ಮೀಸಲು ಅರಣ್ಯ ಹಾಗೂ ದೇವರ ಕಾಡುಗಳಿವೆ. ಇಂತಹ ಸಂದರ್ಭದಲ್ಲಿ ಗ್ರಾಮವನ್ನು ಪರಿಸರ ಸೂಕ್ಷ್ಮವಲಯಕ್ಕೆ ಸೇರಿಸಿದರೆ ಬಡವರು ಹಾಗೂ ಕೃಷಿಕರ ಬದುಕಿಗೆ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.ಪರಿಸರ ಸೂಕ್ಷ್ಮ ವಲಯದಿಂದ ಕೊಳಗದಾಳು ಗ್ರಾಮವನ್ನು ಕೈಬಿಟ್ಟು, ಕರಡು ಅಧಿಸೂಚನೆಯಿಂದ ಗ್ರಾಮ ಹಾಗೂ ಕೊಡಗು ಜಿಲ್ಲೆಗೆ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು. ಆ ಮೂಲಕ ಗ್ರಾಮಸ್ಥರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಆಕ್ಷೇಪಣೆ ಸಲ್ಲಿಸಿದರು.ಸಾರ್ವಜನಿಕರು, ರೈತರು, ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಆಕ್ಷೇಪಣೆ ಅಥವಾ ಸಲಹೆ ಸಲ್ಲಿಸಲು ಕೇಂದ್ರ ಸರ್ಕಾರ 60 ದಿನಗಳ ಕಾಲಾವಕಾಶ ನೀಡಿದ್ದು, ನಮ್ಮ ಮನವಿಯನ್ನು ಸರ್ಕಾರ ಪರಿಗಣಿಸಬೇಕು ಎಂದು ಮನವಿ ಮಾಡಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸುವ ಕುರಿತು ಸೇವ್ ಕೊಡಗು ಸಂಘಟನೆಯ ಸಂಚಾಲಕ ಕೀಪಾಡಂಡ ಮಧು ಬೋಪಣ್ಣ ಮಾತನಾಡಿದರು. ಚೇರಂಬಾಣೆ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಡ್ಡೀರ ಆನಂದ ಹಾಗೂ ಪಟ್ಟಮಾಡ ಪೊನ್ನಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಕೊಳಗದಾಳು ಗ್ರಾಮದ ಕೂರನ ಮೋಹನ್, ಗ್ರಾಪಂ ಮಾಜಿ ಸದಸ್ಯ ಕೆ.ವಿ. ಕಿಶೋರ್ ಕುಮಾರ್, ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಮುಕ್ಕಾಟ್ಟಿ ನಾಣಯ್ಯ, ನಾಳಿಯಮ್ಮನ ಜೀವನ್, ಕುಂಚೆಟ್ಟಿರ ಅಜಿತ್, ರಾಜಪ್ಪ, ಬೇಂಗೂರು ಗ್ರಾಪಂ ಮಾಜಿ ಅಧ್ಯಕ್ಷ ಪಿ.ಜಿ. ಜೀವನ್, ಕೆ.ಬಿ. ಅಶೋಕ್, ಕೊಳಗದಾಳು ಗ್ರಾಮಸ್ಥರು ಹಾಗೂ ಬೇಂಗೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.