ಹನುಮಸಾಗರ: ತಾಲೂಕಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪಡಿತರ ವಿತರಣಾ ವ್ಯವಸ್ಥೆಯ ಸರ್ವರ್ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಪಡಿತರದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ದುಡಿದು ಜೀವನ ನಡೆಸುವ ಅನೇಕ ಕುಟುಂಬಗಳು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ಆಗಮಿಸುತ್ತಾರೆ. ಆದರೆ ಸರ್ವರ್ ನಿಧಾನಗತಿಯ ಕಾರಣದಿಂದ ವಿತರಣೆ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚು ಸಮಯ ಬೇಕಾಗುತ್ತಿದೆ. ಕೆಲವೊಮ್ಮೆ ಬೆಳಗ್ಗೆಯಿಂದ ಅಂಗಡಿ ಮುಂದೆ ಕಾದು ಕುಳಿತರೂ ಪಡಿತರ ಪಡೆಯಲು ಸಾಧ್ಯವಾಗದೆ ಮನೆಗೆ ವಾಪಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಸ್ಯೆ ಅಂಗಡಿಕಾರರದ್ದಲ್ಲ: ಸರ್ವರ್ ಕಾರ್ಯನಿರ್ವಹಿಸದಿರುವುದು ಅಥವಾ ನಿಧಾನವಾಗಿರುವುದು ನ್ಯಾಯಬೆಲೆ ಅಂಗಡಿ ಮಾಲೀಕರ ನಿಯಂತ್ರಣದಲ್ಲಿರುವ ಸಮಸ್ಯೆಯಲ್ಲ. ಆದರೂ ಪಡಿತರದಾರರು ತಮ್ಮ ಅಸಮಾಧಾನವನ್ನು ಅಂಗಡಿ ಮಾಲೀಕರ ಮೇಲೆಯೇ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಅಂಗಡಿ ಮಾಲೀಕರು ಪ್ರತಿದಿನ ಸಾರ್ವಜನಿಕರ ಒತ್ತಡ ಎದುರಿಸುವಂತಾಗಿದೆ. ಕೆಲವೊಮ್ಮೆ ಮಾತಿನ ಚಕಮಕಿಯೂ ನಡೆಯುತ್ತದೆ.ಪಡಿತರ ವಿತರಣೆ ಜತೆಗೆ ಇ-ಕೆವೈಸಿ ಪ್ರಕ್ರಿಯೆಯೂ ವಿಳಂಬವಾಗುತ್ತಿದೆ. ಫಲಾನುಭವಿಗಳ ದಾಖಲೆ ಪರಿಶೀಲನೆ ಹಾಗೂ ಇತರ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ದಿನವಿಡೀ ಕೆಲಸ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ವಿತರಣೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಹೇಳುತ್ತಾರೆ.
ಒಂದೇ ಕಾರ್ಡ್‌ಗೆ 20–25 ನಿಮಿಷ!: ಪಡಿತರ ವಿತರಣೆಯ ಸಂದರ್ಭದಲ್ಲಿ ಹೆಬ್ಬೆಟ್ಟು (ಬೆರಳಚ್ಚು) ದೃಢೀಕರಣ ಪ್ರಕ್ರಿಯೆಯಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಇದರಿಂದ ವಿತರಣೆ ಮತ್ತಷ್ಟು ನಿಧಾನವಾಗುತ್ತಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಒಂದು ಕಾರ್ಡ್‌ದಾರರ ಪಡಿತರ ವಿತರಣಾ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲವೊಮ್ಮೆ 20ರಿಂದ 25 ನಿಮಿಷಗಳ ವರೆಗೆ ಸಮಯ ಬೇಕಾಗುತ್ತಿದೆ.
ಸಮಸ್ಯೆ ಪರಿಹರಿಸಲು ಆಗ್ರಹ: ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ತಾಂತ್ರಿಕ ವಿಭಾಗದವರು ಸರ್ವರ್ ಸಮಸ್ಯೆಯ ಮೂಲ ಕಾರಣ ಪತ್ತೆ ಹಚ್ಚಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಮಿಷನ್ ಹಣವನ್ನು ನಿಯಮಿತವಾಗಿ ಬಿಡುಗಡೆ ಮಾಡುವ ಮೂಲಕ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಅಂಗಡಿಕಾರರು ಆಗ್ರಹಿಸಿದ್ದಾರೆ.