ವಂದೇ ಮಾತರಂ ಗೀತೆ ದೇಶಭಕ್ತಿಯ ಭಾವನೆಗಳ ಜಾಗೃತಗೊಳಿಸಿದ ಶಕ್ತಿ

KannadaprabhaNewsNetwork |  
Published : Aug 26, 2026, 02:45 AM IST
ಹಾವೇರಿ ಜಿ.ಎಚ್. ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳ ಗೀತಗಾಯನ ಸ್ಪರ್ಧೆಯನ್ನು ಹುಕ್ಕೇರಿಮಠದ ಡಾ. ಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವಂದೇ ಮಾತರಂ ಗೀತೆ ಕೇವಲ ಒಂದು ಹಾಡಲ್ಲ. ಅದು ದೇಶಭಕ್ತಿಯ ಭಾವನೆಗಳನ್ನು ಜಾಗೃತಗೊಳಿಸಿದ ಶಕ್ತಿ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಹೋರಾಟಗಾರರಿಗೆ ರಣಮಂತ್ರವಾಗಿದ್ದ ಈ ಗೀತೆಯನ್ನು ಹಾಡುವುದು ಕೂಡ ದೇಶಕ್ಕಾಗಿ ನೀಡುವ ಕೊಡುಗೆಯಾಗಿದೆ ಎಂದು ಹುಕ್ಕೇರಿಮಠದ ಡಾ. ಸದಾಶಿವ ಸ್ವಾಮೀಜಿ ಹೇಳಿದರು.

ಹಾವೇರಿ: ವಂದೇ ಮಾತರಂ ಗೀತೆ ಕೇವಲ ಒಂದು ಹಾಡಲ್ಲ. ಅದು ದೇಶಭಕ್ತಿಯ ಭಾವನೆಗಳನ್ನು ಜಾಗೃತಗೊಳಿಸಿದ ಶಕ್ತಿ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಹೋರಾಟಗಾರರಿಗೆ ರಣಮಂತ್ರವಾಗಿದ್ದ ಈ ಗೀತೆಯನ್ನು ಹಾಡುವುದು ಕೂಡ ದೇಶಕ್ಕಾಗಿ ನೀಡುವ ಕೊಡುಗೆಯಾಗಿದೆ ಎಂದು ಹುಕ್ಕೇರಿಮಠದ ಡಾ. ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಜಿ.ಎಚ್. ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಪ್ರಶಿಕ್ಷಣ ಭಾರತಿ ಹಾವೇರಿ ಜಿಲ್ಲೆ ವತಿಯಿಂದ ವಂದೇ ಮಾತರಂ ಗೀತೆಗೆ 150 ವರ್ಷ ಪೂರೈಸಿದ ಹಿನ್ನೆಲೆ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳ ಗೀತಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ವಂದೇ ಮಾತರಂ ಗೀತೆ ಹಾಡಲು ವಿದ್ಯಾರ್ಥಿಗಳು ಕೇವಲ ಸ್ಪರ್ಧೆಗಾಗಿ ಬಂದಿಲ್ಲ. ದೇಶದ ಮೇಲಿನ ಅಭಿಮಾನ ಹಾಗೂ ಭವಿಷ್ಯದ ಪೀಳಿಗೆಗೆ ದೇಶಭಕ್ತಿಯ ಸಂದೇಶ ಸಾರುವ ಉದ್ದೇಶದಿಂದ ಹಾಡುತ್ತಿದ್ದಾರೆ. ಹಾಡಿಗೆ ಕೇವಲ ಧ್ವನಿ ನೀಡುವುದಷ್ಟೇ ಅಲ್ಲದೆ, ಅದರಲ್ಲಿರುವ ಭಾವನೆಯನ್ನು ಅರ್ಥ ಮಾಡಿಕೊಂಡು ಹಾಡಬೇಕು. ರಾಗ, ತಾಳ, ಶಬ್ದ, ಧ್ವನಿ ಹಾಗೂ ಲಯದ ಮೂಲಕ ಪ್ರಸ್ತುತಪಡಿಸುವುದು ಸಂಗೀತದ ವಿಶೇಷ ವಿದ್ಯೆಯಾಗಿದೆ. ಭಾವನೆ ತುಂಬಿ ಹಾಡುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ ಎಂದರು.

ಸಂಸ್ಕಾರ ಬೆಳೆಸುವ ಕಾರ್ಯವಾಗಲಿ:ಪ್ರಶಿಕ್ಷಣ ಭಾರತಿ ರಾಜ್ಯ ಸಂಚಾಲಕ ಬಸವರಾಜ ಟಿ.ಎಸ್. ಮಾತನಾಡಿ, ಸ್ವಸ್ಥ ಹಾಗೂ ಸುಸ್ಥಿರ ಸಮಾಜ ನಿರ್ಮಾಣದ ಉದ್ದೇಶದಿಂದ ರಾಷ್ಟ್ರೋತ್ಥಾನ ಪರಿಷತ್ ಕಾರ್ಯನಿರ್ವಹಿಸುತ್ತಿದೆ. 1965ರಲ್ಲಿ ಆರಂಭಗೊಂಡ ಸಂಸ್ಥೆ ಶಿಕ್ಷಣ, ಸೇವೆ, ಸಾಹಿತ್ಯ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ವಿದೇಶಿ ಶಿಕ್ಷಣ ವ್ಯವಸ್ಥೆಯ ಪ್ರಭಾವದಿಂದ ಮಾತೆ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತಲೂ ಶ್ರೇಷ್ಠ ಎಂಬ ಭಾವನೆ ಯುವಜನರಲ್ಲಿ ಕಣ್ಮರೆಯಾಗಬಾರದು. ಗೀತಗಾಯನ ಸ್ಪರ್ಧೆಯನ್ನು ಕೇವಲ ಸ್ಪರ್ಧೆಯಾಗಿ ಪರಿಗಣಿಸದೆ, ಅದರ ಹಿಂದಿರುವ ದೇಶಭಕ್ತಿ ಮತ್ತು ಸಂಸ್ಕಾರದ ಸಂದೇಶ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಗ್ಗಾಂವಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಶಿಕ್ಷಣ ದೈವದತ್ತವಾದ ಶಕ್ತಿಯಾಗಿದ್ದು, ಸೂಕ್ತ ಅವಕಾಶ ದೊರೆತಾಗ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರತರಲು ಮಾತ್ರವಲ್ಲದೆ, ರಾಷ್ಟ್ರಾಭಿಮಾನ ಮತ್ತು ದೇಶದ ಬಗ್ಗೆ ಗೌರವ ಬೆಳೆಸಲು ಸಹಕಾರಿಯಾಗುತ್ತವೆ. ರಾಷ್ಟ್ರೀಯ ಗೀತೆಯನ್ನು ಹಾಡುವ ಮೂಲಕ ದೇಶದ ಏಕತೆ, ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಜಿ.ಎಚ್.ಕಾಲೇಜು ಪ್ರಾಚಾರ್ಯ ಮಂಜುನಾಥ ಹೊಳ್ಳಿಯವರ, ಪ್ರಶಿಕ್ಷಣ ಭಾರತಿ ಜಿಲ್ಲಾ ಸಂಚಾಲಕ ರಾಮ್ ಮೋಹನ್ ರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಗೀತಗಾಯನ ಸ್ಪರ್ಧೆಯ ನಿರ್ಣಾಯಕರಾಗಿ ಶ್ರವಣ್ ಕುಲಕರ್ಣಿ, ಹೇಮಾ ಜೋಯಿಶ್ ಹಾಗೂ ಸುಮಿತ್ರಾ ಭೋವಿ ಕಾರ್ಯನಿರ್ವಹಿಸಿದರು. ಪೂಜಾ ಪಾಟೀಲ ಸ್ವಾಗತಿಸಿದರು. ಶಿಲ್ಪಾ ಮಾಗನೂರ ನಿರೂಪಿಸಿದರು. ನಂದಿನಿ ಕುಳೇನೂರ ವಂದಿಸಿದರು.

ಪಾಶ್ಚಾತ್ಯ ಸಂಗೀತ ಹಾಗೂ ಹಿಂದೂಸ್ತಾನಿ ಸಂಗೀತಕ್ಕೆ ವ್ಯತ್ಯಾಸವಿದೆ. ವಂದೇ ಮಾತರಂ ಗೀತೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿಯಾಗಿತ್ತು. ಸ್ವಾತಂತ್ರ್ಯದ ಮನಸ್ಸುಗಳಲ್ಲಿ ಹೊಸ ಚೈತನ್ಯ ಮೂಡಿಸಿದ ಶಕ್ತಿ ಈ ಗೀತೆಯಲ್ಲಿದೆ. ಇಂತಹ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ವಿದ್ಯಾರ್ಥಿಗಳ ಪುಣ್ಯ. ವಂದೇ ಮಾತರಂ ಹಾಡುವ ಮೂಲಕ ದೇಶದ ಶ್ರೇಷ್ಠ ಸತ್ಪ್ರಜೆಗಳಾಗಿ ರೂಪುಗೊಳ್ಳುವ ಸಂಕಲ್ಪ ಮಾಡಬೇಕು ಎಂದು ಹಾವೇರಿ ಹುಕ್ಕೇರಿಮಠ ಡಾ. ಸದಾಶಿವ ಸ್ವಾಮೀಜಿ ಹೇಳಿದರು.

ಜಿಲ್ಲಾಮಟ್ಟದ ಶಾಲಾ ವಿದ್ಯಾರ್ಥಿಗಳ ಗೀತಗಾಯನ ಸ್ಪರ್ಧೆಯಲ್ಲಿ ರಾಣಿಬೆನ್ನೂರಿನ ಕಣ್ಣೂರು ವಿದ್ಯಾನಿಕೇತನ ಶಾಲೆ ಪ್ರಥಮ, ಹಾನಗಲ್ಲನ ಆಕ್ಸಫರ್ಡ್ ಶಾಲೆ ದ್ವಿತಿಯ ಹಾಗೂ ರಾಣಿಬೆನ್ನೂರ ತಾಲೂಕಿನ ಕುಮಾರಪಟ್ಟಣದ ಅಮೃತವರ್ಷಿಣಿ ಶಾಲೆಯ ಮಕ್ಕಳು ತೃತೀಯ ಸ್ಥಾನಕ್ಕೆ ಭಾಜನರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲು ಅರಣ್ಯದಲ್ಲಿ ಕಳ್ಳ ಬೇಟೆ ಯತ್ನ: ಮೂವರು ವಶಕ್ಕೆ
ಕೊಡಗಿನಲ್ಲಿ ಮುಸಲಧಾರೆ: ತ್ರಿವೇಣಿ ಸಂಗಮ ಮುಳುಗಡೆ