ಕನ್ನಡಪ್ರಭ ವಾರ್ತೆ ಕಾರವಾರ
ಹಲವು ವರ್ಷಗಳಿಂದ ಕಡವಾಡ ಸ್ಮಶಾನಕ್ಕೆ ತೆರಳಲು ಸರಿಯಾದ ರಸ್ತೆ ಸಂಪರ್ಕವಿಲ್ಲದೆ, ಶವವನ್ನು ಹೊತ್ತುಕೊಂಡು ಎತ್ತರದ ರೈಲ್ವೆ ಹಳಿ ದಾಟಿ ಹೋಗಬೇಕಾದ ದುಸ್ಥಿತಿ ಇತ್ತು. ಜೊತೆಗೆ ಸ್ಮಶಾನದಲ್ಲಿ ನೀರಿನ ಅಭಾವ ಕೂಡ ಎದುರಾಗಿತ್ತು. ಈ ಗಂಭೀರ ಸಮಸ್ಯೆಯನ್ನು ಅರಿತ ಗ್ರಾಪಂ ಆಡಳಿತ ಮಂಡಳಿ, ಕರವೇ ಸಂಘಟನೆ ಹಾಗೂ ಸ್ಥಳೀಯರು ಶಾಸಕರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಕಾರವಾರ ಶಾಸಕ ಸತೀಶ್ ಸೈಲ್, ತಮ್ಮ ಅನುದಾನದಡಿ ಸ್ಮಶಾನಕ್ಕೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ. ಶಾಸಕರ ಈ ತ್ವರಿತ ಸ್ಪಂದನೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.
ಇದೇ ವೇಳೆ, ಸ್ಮಶಾನದಲ್ಲಿ ನೀರಿನ ಸಮಸ್ಯೆ ನೀಗಿಸಲು ಕಡವಾಡ ಗ್ರಾಪಂ ವತಿಯಿಂದ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನೂತನ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಆದರೆ, ಶವ ಸಂಸ್ಕಾರಕ್ಕೆ ನಿರ್ಮಿಸಲಾಗುತ್ತಿರುವ ಶೆಡ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸದ್ಯ ಪಿಲ್ಲರ್ ಕೆಲಸ ಮುಗಿದಿದ್ದರೂ, ಮೇಲ್ಛಾವಣಿ ಶೀಟ್ ಅಳವಡಿಕೆ ಹಾಗೂ ಶವ ಸಂಸ್ಕಾರ ಮಾಡುವ ಕಬ್ಬಿಣದ ರಾಡ್ ಅಳವಡಿಕೆ ಬಾಕಿ ಉಳಿದಿದೆ. ಮಳೆಗಾಲ ಆರಂಭವಾಗುವ ಮುನ್ನ ಈ ಶೆಡ್ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಶವಸಂಸ್ಕಾರ ನೆರವೇರಿಸಲು ತೀವ್ರ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಪಂ ಅಧ್ಯಕ್ಷ ಆನಂದು ಆರ್.ನಾಯ್ಕ, ಪ್ರಸ್ತುತ ಸ್ಮಶಾನದ ಹಳೆಯ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಮುರಿದು ಬಿದ್ದಿದ್ದು, ಹೊಸದನ್ನು ಅಳವಡಿಸಲು ಹಾಗೂ ಆವರಣದಲ್ಲಿ ಸಿಮೆಂಟ್ ಬ್ಲಾಕ್ ಹಾಕಲು ಪಂಚಾಯಿತಿ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ಈಗ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರು ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.