ಧಾರವಾಡ: ಸರ್ಕಾರಿ ನೌಕರರ ಒತ್ತಡ ಕಡಿಮೆಯಾಗಬೇಕಾದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.70 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸರ್ಕಾರಕ್ಕೆ ಮನವಿ ಮಾಡಿದರು.
ನಗರದ ವಿದ್ಯಾಗಿರಿಯ ಜೆ.ಎಸ್.ಎಸ್. ಆವರಣದಲ್ಲಿನ ಸನ್ನಿಧಿ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘ ಹಾಗೂ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ರಾಜ್ಯ ಸರ್ಕಾರಿ ನೌಕರರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೌಕರರ ಮೇಲೆ ದಿನದಿಂದ ದಿನಕ್ಕೆ ಕೆಲಸದ ಒತ್ತಡ, ಅನಗತ್ಯ ಕಿರಿಕಿರಿ ಆಗುತ್ತಿದೆ. ಪ್ರತಿ ಇಲಾಖೆಯಲ್ಲಿ ಒಬ್ಬ ನೌಕರ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾನೆ. ಇದರಿಂದ ಅನೇಕ ರೀತಿಯ ದೈಹಿಕ, ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರಿ ನೌಕರ ಸಂಘದ ನೇತೃತ್ವ ವಹಿಸಿರುವ ನಾನು 5.20 ಲಕ್ಷ ಜನ ಸರ್ಕಾರಿ ನೌಕರರ ಹಿತಾಸಕ್ತಿ ರಕ್ಷಣೆಗೆ ಬದ್ಧನಿದ್ದು, ಬೇಡಿಕೆಗಳ ಈಡೇರಿಕೆಗಾಗಿ ಯಾವ ವ್ಯಕ್ತಿ, ಸಂಸ್ಥೆ, ಸರ್ಕಾರದೊಂದಿಗೆ ಹೊಂದಾಣಿಕೆ ರಾಜಕೀಯವೇ ಇಲ್ಲ, ಅಗತ್ಯಬಿದ್ದರೆ ಹೋರಾಟದಲ್ಲಿ ಜೈಲು, ಅಮಾನತ್ತು, ಶಿಕ್ಷೆಗಳಿಗೂ ಸದಾ ಸಿದ್ಧ ಎಂದರು.ಸಂಘದ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ. ಈಗಾಗಲೇ 7ನೇ ವೇತನ ಆಯೋಗ ಜಾರಿಯಾಗಿದೆ. ಎನ್.ಪಿ.ಎಸ್. ಬದಲಾಗಿ ಓಪಿಸಿ ಯೋಜನೆ ಜಾರಿ ಆಗಬೇಕು. ಈ ಕುರಿತು ಈಗಾಗಲೇ ರಚಿಸಿರುವ ಅಧ್ಯಯನ ಸಮಿತಿ ಮುಂದಿನ ತಿಂಗಳು ವರದಿ ಸಲ್ಲಿಸಲಿದೆ. 2-3 ತಿಂಗಳಲ್ಲಿ ಸರ್ಕಾರ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆ ಸಂಘಟನೆಗಿದೆ. ನ್ಯಾಯ ಸಿಗದಿದ್ದಲ್ಲಿ ರಾಜ್ಯ ವ್ಯಾಪಿ ಹೋರಾಟಕ್ಕೆ ಸಂಘ ಮುಂದಾಗಲಿದೆ ಎಂದು ಸಿ.ಎಸ್. ಷಡಾಕ್ಷರಿ ತಿಳಿಸಿದರು.
ಸಂಘದ ಮಹತ್ವಾಕಾಂಕ್ಷಿ ಆರೋಗ್ಯ ಯೋಜನೆ ಬರುವ ತಿಂಗಳು ಜಾರಿಗಲಿದೆ. ಅಂದಾಜು 25 ಲಕ್ಷ ಜನರಿಗೆ ಅನುಕೂಲ ಆಗಲಿದೆ ಎಂದ ಅವರು, ನೌಕರರಿಗೆ ವೇತನ ಪ್ಯಾಕೆಜ್ ಖಾತೆ ಸೌಲಭ್ಯ ಅನ್ವಯಿಸಿದ್ದು, ಯಾವುದೇ ನೌಕರ ಆಕಸ್ಮಿಕ ನಿಧನರಾದರೆ ಈ ಯೋಜನೆಯಡಿ ಅವರ ಕುಟುಂಬಕ್ಕೆ ಒಂದು ಕೋಟಿ ಮೊತ್ತದ ಪರಿಹಾರ ಲಭಿಸುತ್ತದೆ ಎಂದರು.ಸುವರ್ಣ ಸುದ್ದಿ ವಾಹಿನಿ ಸಂಪಾದಕ ಅಜೀತ ಹನುಮಕ್ಕನವರ ಮಾತನಾಡಿ, ಇಂದಿನ ಮಕ್ಕಳಿಗೆ ಕೌಶಲ್ಯದ ಅಗತ್ಯವಿದೆ. ಕೌಶಲ್ಯಭರಿತ ಶಿಕ್ಷಣ ನಿರುದ್ಯೋಗಕ್ಕೆ ಪರಿಹಾರ. ವಿದ್ಯಾರ್ಥಿಗಳು ಬರೀ ಸರ್ಕಾರಿ ನೌಕರಿ ಬಗ್ಗೆ ಚಿಂತನೆ ಮಾಡದೇ ಸ್ವ ಉದ್ಯೋಗ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಇತರರಿಗೆ ಉದ್ಯೋಗ ನೀಡವಂತ, ಸ್ವತಂತ್ರವಾಗಿ ಬೆಳೆಯುವ ಸಾಹಸ ಮಾಡಬೇಕು. ಯುವಕರಲ್ಲಿ ನಿಸ್ವಾರ್ಥ, ಬದ್ಧತೆ ಬಳೆಯಬೇಕು ಎಂದರು.
ಸಾನಿಧ್ಯ ವಹಿಸಿದ್ದ ಶಿರಹಟ್ಟಿಯ ದಿಂಗಾಲೇಶ್ವರ ಸ್ವಾಮೀಜಿ, ಮಕ್ಕಳಲ್ಲಿ ಭಾಷಾ ವೈವಿದ್ಯತೆ ಬರಬೇಕು. ಭಾಷೆ ಕಲಿಕೆಯಲ್ಲಿ ಮಡಿವಂತಿಕೆ ಬೇಡ. ಮಾತೃಭಾಷಾ ಕಲಿಕೆ ಮುಖ್ಯವಾಗಿದೆ. ನಾಡಿನ ಸಂಸ್ಕೃತಿ, ಮನೆತನದ ಪರಂಪರೆ ಬೆಳೆಯುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರ ಪಾತ್ರ ಮುಖ್ಯವಾಗಿದೆ ಎಂದರು.ನೌಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರಿಗೌಡ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಸ್ವಾಗತಿಸಿದರು. ಖಜಾಂಚಿ ಮಂಜುನಾಥ ಯಡಳ್ಳಿ ವಂದಿಸಿದರು. ಕಾಯರ್ದರ್ಶಿ ರಮೇಶ ಲಿಂಗದಾಳ ಹಾಗೂ ವಿಜಯಲಕ್ಚ್ಮಿ ಎಚ್. ನಿರೂಪಿಸಿದರು.
ವೇದಿಕೆಯಲ್ಲಿ ರಾಜ್ಯ ಗೌರವಾಧ್ಯಕ್ಷ ಎಸ್. ಬಸವರಾಜು, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಹಿರಿಯ ಉಪಾಧ್ಯಕ್ಷ ಸುರೇಶ ಶೆಡಶ್ಯಾಳ, ಮಲ್ಲಿಕಾರ್ಜುನ ಸೊಲಗಿ ಮತ್ತಿತರರು ಇದ್ದರು. ಎಸ್ಸೆಸ್ಸೆಲ್ಸಿ. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದ ಮೂರು ಜಿಲ್ಲೆಗಳ 511 ವಿದ್ಯಾರ್ಥಿಗಳಿಗೆ ಗೌರವಿಸಿ ಪ್ರೋತ್ಸಾಹ ಧನ ನೀಡಲಾಯಿತು.